ಜೈಲರ್​ನಲ್ಲಿ ತಮನ್ನಾ; ರಜನಿಕಾಂತ್ ಜತೆಗೆ ಮೊದಲ ಬಾರಿಗೆ ನಟನೆ

Jailor
Published on

ಸೂಪರ್ ಸ್ಟಾರ್ ರಜಿನಿಕಾಂತ್ ನಾಯಕನಾಗಿರುವ 169ನೇ ಚಿತ್ರ ‘ಜೈಲರ್’. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬೇರೆ ಚಿತ್ರರಂಗಗಳ ಸ್ಟಾರ್ ನಟರೂ ಪ್ರಮುಖ ತಾರಾಗಣದಲ್ಲಿದ್ದಾರೆ. ಕನ್ನಡ ಚಿತ್ರರಂಗದಿಂದ ಶಿವರಾಜಕುಮಾರ್, ಮಲಯಾಳಂನಿಂದ ಮೋಹನ್ ಲಾಲ್ ಹಾಗೂ ಟಾಲಿವುಡ್ ನಟ ಸುನೀಲ್ ಜೈಲರ್​ನಲ್ಲಿ ನಟಿಸುತ್ತಿದ್ದು, ಅವರ ಲುಕ್​ಗಳು ಸಹ ಬಿಡುಗಡೆಯಾಗಿವೆ. ಇದೀಗ ಚಿತ್ರತಂಡವನ್ನು ತಮನ್ನಾ ಭಾಟಿಯಾ ಸೇರಿಕೊಂಡಿದ್ದು, ಅವರ ಮೊದಲ ನೋಟ ಕೂಡ ರಿಲೀಸ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ತಮನ್ನಾ, ‘ಕೊನೆಗೂ ಈ ವಿಷಯವನ್ನು ನಿಮ್ಮ ಜತೆ ಹಂಚಿಕೊಳ್ಳುವ ಸಕಾಲ ಬಂದಿದೆ. ಜೈಲರ್ ಚಿತ್ರದಲ್ಲಿ ನಟಿಸುತ್ತಿರುವುದು ನನ್ನಲ್ಲಿ ಅತೀವ ಸಂತೋಷ ಮೂಡಿಸಿದೆ. ಒನ್ ಆಂಡ್ ಓನ್ಲಿ ತಲೈವಾ ರಜಿನಿಕಾಂತ್ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ. ಚಿತ್ರೀಕರಣದ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ರಜಿನಿಕಾಂತ್, ತಮನ್ನಾ, ಶಿವರಾಜಕುಮಾರ್, ಮೋಹನ್​ಲಾಲ್, ಸುನೀಲ್ ಜತೆ ರಮ್ಯಾಕೃಷ್ಣ, ಯೋಗಿಬಾಬು, ವಿನಾಯಕನ್, ವಸಂತ್ ರವಿ ಕೂಡ ಪ್ರಮುಖ ತಾರಾಗಣದಲ್ಲಿದ್ದಾರೆ. ‘ಜೈಲರ್’ ಜತೆಗೆ ಚಿರಂಜೀವಿ ಅಭಿನಯದ ತೆಲುಗು ಚಿತ್ರ ‘ಭೋಲಾ ಶಂಕರ್’, ಹಿಂದಿಯ ‘ಬೋಲೆ ಚೂಡಿಯಾ’ ಹಾಗೂ ಮಲಯಾಳಂ ಸಿನಿಮಾ ‘ಬಾಂದ್ರಾ’ದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net