

ರಾಣೆಬೆನ್ನೂರ: ಹಿಂದುಳಿದ ವರ್ಗದವರನ್ನು ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಲೆಗೆ ಬರಲು ಡಿ. ದೇವರಾಜ ಅರಸು ಅವರ ಶ್ರಮ ಹಾಗೂ ಪ್ರಯತ್ನ ಬಹುದೊಡ್ಡದಿದೆ. ಅಂತವರ ಚಿಂತನೆ ಹಾಗೂ ಆದರ್ಶಗಳು ಇಂದಿನ ಮಕ್ಕಳಿಗೆ ತಿಳಿಸುವ ಅವಶ್ಯಕತೆಯಿದೆ ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
ತಾಲೂಕು ಆಡಳಿತ, ತಾಪಂ, ನಗರಸಭೆ ವತಿಯಿಂದ ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯರನ್ನು ಮನುಷ್ಯರಂತೆ ಕಾಣದ ಈ ಸಮಾಜದಲ್ಲಿ ಹಿಂದುಳಿದ ವರ್ಗದವರು ಸೇರಿ ಎಲ್ಲರಿಗೂ ಸಮಾನ ವೇದಿಕೆ ತಂದುಕೊಟ್ಟವರು ಅರಸು ಅವರು. ದೇವರಾಜ ಅರಸು ಇಲ್ಲದಿದ್ದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇರುತ್ತಿರಲಿಲ್ಲ. ಹಿಂದುಳಿದ ವರ್ಗಗಳ ಜನರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಶೈಕ್ಷಣಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದರು.
ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ತಹಸೀಲ್ದಾರ್ ಕಚೇರಿಯಿಂದ ತಾಪಂ ಸಭಾಭವನದ ವರೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ತಾಪಂ ಇಒ ಪರಮೇಶ, ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ಪ್ರಮುಖರಾದ ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ, ಕೊಟ್ರೇಶಪ್ಪ ಎಮ್ಮಿ, ಪ್ರಭಾಕರ ಶಿಗ್ಲಿ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.