15ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ತಲ್ಕಿ ನಾಟಕ ಪ್ರದರ್ಶನ

Talki Drama press meet
ಶಿವಮೊಗ್ಗದಲ್ಲಿ ಪಯಣ ಸಂಸ್ಥೆಯ ಚಾಂದಿನಿ ಮಾತನಾಡಿದರು. ನಿರ್ದೇಶಕ ಶ್ರೀಜಿತ್ ಸುಂದರಂ, ನಟಿಯರಾದ ಎ.ರೇವತಿ, ಭಾನಮ್ಮ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಬೆಂಗಳೂರಿನ ಪಯಣ ಸಂಸ್ಥೆ, ಪೀಪಲ್ಸ್ ಲಾಯರ್ಸ್‌ ಗೀಲ್ಡ್, ಶಿವಮೊಗ್ಗದ ರಕ್ಷ ಸಮುದಾಯ, ರಂಗಾಯಣ ನೇಟಿವ್ ಥೇಟರ್ ಆಶ್ರಯದಲ್ಲಿ ಜೂ.15ರ ಸಂಜೆ 6.30ಕ್ಕೆ ಲೈಂಗಿಕ ಸಮುದಾಯದ ಜೀವನ ಚಿತ್ರಣವಿರುವ ತಲ್ಕಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪಯಣ ಸಂಸ್ಥೆಯ ಚಾಂದಿನಿ ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನು, ಬದುಕನ್ನು ಹಾಗೂ ಸುಖ-ದುಃಖಗಳನ್ನು ಬಿಂಬಿಸುವ ನಾಟಕ ತಲ್ಕಿ. ಇದುವರೆಗೂ ಲೈಂಗಿಕ ಅಲ್ಪಸಂಖ್ಯಾತರ ಕುರಿತು ನಾಟಕಗಳನ್ನು ಮಾಡುತ್ತಿದ್ದರು. ಆದರೆ ಈಗ ಲೈಂಗಿಕ ಅಲ್ಪಸಂಖ್ಯಾತರೇ ಸೇರಿಕೊಂಡು ನಾಟಕದಲ್ಲಿ ಅಭಿನಯಿಸುತ್ತಿದ್ದೇವೆ. 14ರಂದು ಮಧ್ಯಾಹ್ನ 2.30ಕ್ಕೆ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜು, 15ರಂದು ಸಂಜೆ 6.30ಕ್ಕೆ ರಂಗಾಯಣದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಟಕವನ್ನು ಶ್ರೀಜಿತ್ ಸುಂದರಂ ನಿರ್ದೇಶಿಸಿದ್ದಾರೆ. ರೇವತಿ ಸಹಾಯಕ ನಿರ್ದೇಶಕಿಯಾಗಿದ್ದು, ಸಂದೀಪ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಶಾಂತಮ್ಮ, ಲಕ್ಷ್ಮೀಯಮ್ಮ, ರೇವತಿ, ಭಾನಮ್ಮ, ಶೋಭನಾಕುಮಾರಿ, ಸರವನ, ಚಾಂದಿನಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಎಲ್ಲ ನಟಿಯರ ಜೀವನ ಚಿತ್ರದ ತುಣುಕುಗಳು ಇಲ್ಲಿವೆ. ನೈಜ ಘಟನೆಯಾಗಿವೆ. ನಮ್ಮ ನೋವುಗಳನ್ನು ನಾವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸವಿತಾ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ನೋವು, ನಲಿವು, ಪ್ರೀತಿ, ಮದ, ಮೋಹ, ಮತ್ಸರ ಸಮುದಾಯದಿಂದ ದೂಡಲ್ಪಟ್ಟ ವ್ಯಥೆ ನಮ್ಮ ಕಥೆ ಇವೆಲ್ಲವೂ ನಾಟಕದ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ. ನಮ್ಮ ಸಮುದಾಯದ ಬಗ್ಗೆ ಎಲ್ಲಿಯೂ ಪಠ್ಯಗಳಿಲ್ಲ. ನಮ್ಮನ್ನು ನಾವೇ ಸಂತೈಸಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಶಿವಮೊಗ್ಗದ ರಕ್ಷಾ ಸಮುದಾಯದ ಮುಖ್ಯಸ್ಥ ಮೊಹಮದ್ ಸೈುಲ್ಲಾ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಕ್ಷಾ ಸಮುದಾಯ ಕೆಲಸ ಮಾಡುತ್ತ ಬಂದಿದೆ. ನಾಟಕದ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಾಟಕ ಪ್ರದರ್ಶಿಸಲಾಗುತ್ತದೆ ಎಂದರು. ನಿರ್ದೇಶಕ ಶ್ರೀಜಿತ್ ಸುಂದರಂ, ನಟಿಯರಾದ ಎ.ರೇವತಿ, ಭಾನಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net