

ಕಾಬುಲ್: ನಿಗದಿಯಾಗಿರುವ ಆಗಸ್ಟ್ 31ರ ಗಡುವಿನೊಳಗೆ ಜಾಗ ಖಾಲಿ ಮಾಡಿ. ತಪ್ಪಿದರೆ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆ ಎಂದು ಅಮೆರಿಕ ಮತ್ತು ಬ್ರಿಟನ್ಗಳಿಗೆ ತಾಲಿಬಾನ್ ನೇರ ಎಚ್ಚರಿಕೆ ನೀಡಿದೆ. ತಾಲಿಬಾನ್ ವಕ್ತಾರ ಡಾ. ಸುಹೈಲ್ ಶಹೀನ್ ಸೋಮವಾರ ಸುದ್ದಿಗೋಷ್ಠಿ ನಡೆಸಿ, ವಿದೇಶಿ ಸೇನೆಗಳನ್ನು ಹಿಂಪಡೆಯುವುದಕ್ಕೆ ನಿಗದಿಯಾಗಿರುವ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲ. ಒಂದೊಮ್ಮೆ ಆ.31ರ ಬಳಿಕವೂ ಅವು ಮುಂದುವರಿದರೆ ಅದು ಪ್ರಚೋದನಕಾರಿ ನಡೆಯಾಗುತ್ತದೆ. ಅದರ ಪರಿಣಾಮವನ್ನು ಅಮರಿಕ, ಬ್ರಿಟನ್ಗಳು ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾನೆ.
ಜನರು ಪಲಾಯನ ಮಾಡ್ತಿಲ್ಲ: ಅಫ್ಘಾನಿಸ್ತಾನದಿಂದ ಜನ ಪಲಾಯನ ಮಾಡ್ತಿಲ್ಲ. ಆದರೆ ಅವರು ಭಯಭೀತರಾಗಿದ್ದಾರೆ. ಈಗ ಕಾಬುಲ್ ಏರ್ಪೋರ್ಟ್ನಲ್ಲಿ ಕಾಣುತ್ತಿರುವ ಹತಾಶ ಮನಸ್ಥಿತಿ ‘ಆರ್ಥಿಕ ವಲಸೆ’ಯೇ ಹೊರತು ಬೇರೇನೂ ಅಲ್ಲ ಎಂದು ತಾಲಿಬಾನ್ ವಕ್ತಾರ ಡಾ. ಸುಹೈಲ್ ಶಹೀನ್ ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾನೆ.
ಹಿಜಬ್ ಧರಿಸಿದ್ರೆ ಸಾಕು!: ಹೆಣ್ಣು ಮಕ್ಕಳು ಮನೆಯಿಂದ ಹೊರಬರುವಾಗ ಹಿಜಬ್ ಧರಿಸಬೇಕು. ಅದರಿಂದ ಅವರು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಉಳಿದಂತೆ ಹೆಣ್ಣುಮಕ್ಕಳಿಗೆ ಎಲ್ಲ ಅಧಿಕಾರಗಳು, ಹಕ್ಕುಗಳು ಇರಲಿವೆ. ಪತ್ರಕರ್ತೆಯರು, ಶಿಕ್ಷಕಿಯರು ಅವರವರ ಕೆಲಸವನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹೆಣ್ಣು ಮಕ್ಕಳ ಶಾಲೆ ಮುಚ್ಚುತ್ತಿಲ್ಲ. ಅದು ಸುಳ್ಳು ಸುದ್ದಿ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗಬಾರದು ಎಂದು ತಡೆಯುತ್ತಿಲ್ಲ. ಯಾವ ಮಹಿಳೆಯನ್ನೂ ಈ ಕುರಿತು ಬೆದರಿಸಿಲ್ಲ. ಅವರ ಹಕ್ಕುಗಳನ್ನು ಕಸಿಯಲಾಗುತ್ತಿಲ್ಲ. ಎಲ್ಲವೂ ಸುಳ್ಳು ಎಂದು ಡಾ. ಸುಹೈಲ್ ಶಹೀನ್ ಹೇಳಿದ್ದಾನೆ.
ಕಾಬುಲ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಸಿಖ್ಖರಿದ್ದಾರೆ. ಅವರನ್ನು ಅಲ್ಲಿಂದ ಸ್ಥಳಾಂತರಿಸುವುದಕ್ಕೆ ನೆರವು ಬೇಕಾಗಿದೆ ಎಂದು ಅಮೆರಿಕದ ಯುನೈಟೆಡ್ ಸಿಖ್ಸ್ ಸಂಘಟನೆ ಹೇಳಿದೆ. ಕಾಬುಲ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಸಿಖ್ಖರಿದ್ದಾರೆ. ಅವರಲ್ಲಿ ಮಹಿಳೆಯರು ಮತ್ತು 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ನಾಲ್ಕು ನವಜಾತ ಶಿಶುಗಳಿವೆ. ತಾಲಿಬಾನ್ ವಶಕ್ಕೆ ಅಫ್ಘನ್ ಹೋದ ನಂತರ ಸಿಖ್ಖರನ್ನು ಅಲ್ಲಿಂದ ಸ್ಥಳಾಂತರಿಸುವ ಕೆಲಸದಲ್ಲಿ ಭಾರತ ಮಾತ್ರವೇ ನೆರವು ನೀಡಿದೆ. ಅಮೆರಿಕ, ಪಾಕಿಸ್ತಾನ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ತಜಕಿಸ್ತಾನ್, ಇರಾನ್ ಸರ್ಕಾರಗಳಿಗೂ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ಸಂಘಟನೆ ಹೇಳಿದೆ.
ಭಾರತೀಯರ ಸ್ಥಳಾಂತರ ಕಾರ್ಯ ಕೊನೆ ಹಂತದಲ್ಲಿ: ಅಫ್ಘನ್ನಿಂದ ಭಾರತೀಯರ ತೆರವು ಕಾರ್ಯಾಚರಣೆ ಕೊನೆಯ ಹಂತ ತಲುಪಿದೆ. ಸೋಮವಾರ ಎರಡು ವಿಮಾನಗಳ ಮೂಲಕ ಕಾಬುಲ್ನಿಂದ ಭಾರತೀಯರ ತಂಡವನ್ನು ಭಾರತಕ್ಕೆ ಕರೆ ತರಲಾಗಿದೆ. ಆಗಸ್ಟ್ 15ರಿಂದ ಈಚೆಗೆ 700ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿ ಒಬ್ಬ ಬಲಿ: ಕಾಬುಲ್ ಏರ್ಪೋರ್ಟ್ನಲ್ಲಿ ಸೋಮವಾರ ಗುಂಡಿನ ಕಾಳಗ ಏರ್ಪಟ್ಟಿದ್ದು, ಒಬ್ಬ ಅಫ್ಘನ್ ಗಾರ್ಡ್ ಮೃತಪಟ್ಟಿದ್ದಾನೆ. ಮೂವರು ಗಾಯಗೊಂಡಿದ್ದಾರೆ ಎಂದು ಜರ್ಮನಿ ಸೇನೆ ಹೇಳಿದೆ. ವಿಮಾನ ನಿಲ್ದಾಣದ ಉತ್ತರ ಭಾಗದ ಗೇಟ್ನಲ್ಲಿ ಅಪರಿಚಿತ ದುಷ್ಕರ್ವಿುಗಳು ಅಫ್ಘನ್ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರಿಂದಾಗಿ ಗುಂಡಿನ ಕಾಳಗ ನಡೆಯಿತು. ಇದರಲ್ಲಿ ಅಮೆರಿಕ, ಜರ್ಮನಿಯ ಯೋಧರೂ ಭಾಗಿಯಾಗಿದ್ದರು.
ಕಾಬುಲ್ನ ಹಮೀದ್ ಕರ್ಜೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರು ಪ್ರವೇಶಿಸಬೇಕು ಎಂಬುದಕ್ಕೆ ಅಮೆರಿಕ ರಾಯ ಭಾರ ಕಚೇರಿ 4 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ದೋಹಾದಿಂದ 146 ಭಾರತೀಯರು: ಅಮೆರಿಕ ಮತ್ತು ನ್ಯಾಟೋ ಪಡೆಗಳ ನೆರವಿನೊಂದಿಗೆ ಕತಾರ್ನ ರಾಜಧಾನಿ ದೋಹಾ ತಲುಪಿದ್ದ 146 ಭಾರತೀಯರನ್ನು ಭಾರತ ನಾಲ್ಕು ಪ್ರತ್ಯೇಕ ವಿಮಾನಗಳ ಮೂಲಕ ಸೋಮವಾರ ಸ್ವದೇಶಕ್ಕೆ ಕರೆತಂದಿದೆ. ಭಾನುವಾರ 135 ಭಾರತೀಯರು ದೋಹಾದಿಂದ ದೆಹಲಿ ತಲುಪಿದ್ದರು.