ತಾಲಿಬಾನ್​ ಸುಪ್ರೀಂ ಮುಖಂಡ ಪ್ರತ್ಯಕ್ಷ

Haiba
Published on

ಕಾಬುಲ್​: ತಾಲಿಬಾನ್​ನ ಸವೋರ್ಚ್ಚ ನಾಯಕ ಹೈಬತುಲ್ಲಾ ಅಖುಂಡ್​ಝದಾ ಇದೇ ಮೊದಲ ಬಾರಿಗೆ ಕಂದಹಾರ್​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಸ್ಲಾಮಿಕ್​ ಚಳವಳಿಯ ಧಾರ್ಮಿಕ ಮುಖ್ಯಸ್ಥ ಅಖುಂಡ್​ಝದಾ 2016ರಿಂದ ನೇಪಥ್ಯದಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದು, ತಾಲಿಬಾನ್​ ಸರ್ಕಾರ ರಚನೆಯಾಗುತ್ತಿರುವಂತೆ ಆಡಳಿತ ಸೂತ್ರ ಕೈಗೆತೆಗೆದುಕೊಳ್ಳುತ್ತಾನೆ ಎಂದು ಸುದ್ದಿಯಾಗಿತ್ತು. ಬಳಿಕ, ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂದೂ ವರದಿಯಾಗಿತ್ತು.

ಅಖುಂಡ್​ಝದಾ, ಕಂದಹಾರ್​ನ ದಾರುಲ್​ ಉಲೂಮ್​ ಹಕಿಮಹ್​ ಮದ್ರಸ್ಸಾಕ್ಕೆ ಭೇಟಿ ನೀಡಿದ್ದು, ಮೂಲಭೂತವಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದ. ಕಾರ್ಯಕ್ರಮ ಸ್ಥಳದಲ್ಲಿ ಬಿಗಿ ಬಂದೋಬಸ್ತ್​ ಇತ್ತು. ಫೋಟೋ, ವಿಡಿಯೋ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಕೇವಲ 10 ನಿಮಿಷಗಳ ಆಡಿಯೋ ರೆಕಾರ್ಡಿಂಗ್​ ಮಾಡಲಾಗಿದ್ದು, ಅದನ್ನು ತಾಲಿಬಾನ್​ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಅಖುಂಡ್​ಝದಾನನ್ನು ಅಮಿರುಲ್​ ಮೊಮಿನೀನ್​ ಎಂದು ಸಂಬೋಧಿಸಲಾಗುತ್ತಿದೆ. ಅವರ ಭಾಷಣದಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ದೇವರ ವಿಚಾರವನ್ನಷ್ಟೇ ಮಾತನಾಡಿದರು ಎಂದು ತಾಲಿಬಾನ್​ ಮೂಲಗಳು ತಿಳಿಸಿವೆ. ಅಮೆರಿಕದ ಸೇನೆ 2016ರಲ್ಲಿ ನಡೆಸಿದ ಡ್ರೋನ್​ ದಾಳಿಗೆ ತಾಲಿಬಾನ್​ನ ನಾಯಕ ಮುಲ್ಲಾ ಅಖ್ತರ್​ ಮನ್ಸೂರ್​ ಹತನಾದ ಬಳಿಕ, ಅಖುಂಡ್​ಝದಾ ನಾಯಕತ್ವವನ್ನು ವಹಿಸಿದ್ದಾನೆ. ಅಲ್ಲಿಂದೀಚೆಗೆ ಆತ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಸರ್ಕಾರಕ್ಕೆ ಮಾನ್ಯತೆ ಕೊಡದಿದ್ದರೆ ದುಷ್ಪರಿಣಾಮವೆಂದು ಎಚ್ಚರಿಕೆ ಅಫ್ಘಾನಿಸ್ತಾನದ ತನ್ನ ಸರ್ಕಾರಕ್ಕೆ ಮಾನ್ಯತೆ ನೀಡದಿದ್ದರೆ "ಜಾಗತಿಕ ಪರಿಣಾಮ' ಎದುರಿಸಬೇಕಾದೀತೆಂದು ತಾಲಿಬಾನ್​ ಎಚ್ಚರಿಸಿದೆ. ಜಗತ್ತಿನ ಯಾವುದೇ ದೇಶ ತಾಲಿಬಾನ್​ ಸರ್ಕಾರವನ್ನು ಇದುವರೆಗೆ ಮಾನ್ಯ ಮಾಡಿಲ್ಲ. ಆದರೆ ಅನೇಕ ದೇಶಗಳ ಹಿರಿಯ ಅಧಿಕಾರಿಗಳು ತಾಲಿಬಾನ್​ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮಾನ್ಯತೆ ನೀಡದಿದ್ದರೆ ಹಾಗೂ ವಿದೇಶಗಳಲ್ಲಿರುವ ಅ್ಘಾನಿಸ್ತಾನದ ಹಣವನ್ನು ಸ್ಥಗಿತಗೊಳಿಸಿದರೆ ಅಂತಹ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಮಸ್ಯೆಯುಂಟಾಗಬಹುದು ಎಂದು ಅದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net