ಜಾಗತಿಕ ಸಮುದಾಯದ ಮಾನ್ಯತೆಗೆ ಪ್ರಯತ್ನ: ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಗೆ ಸ್ಥಾನ ಕೋರಿದ ತಾಲಿಬಾನ್

Afghan
Published on

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ಒದಗಿಸುವ ಪ್ರಯತ್ನಕ್ಕೆ ಪಾಕಿಸ್ತಾನ, ಚೀನಾಗಳು ಪ್ರಯತ್ನಿಸತೊಡಗಿವೆ. ಈ ನಡುವೆ, ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿ ನೇಮಕಕ್ಕೆ ತಾಲಿಬಾನ್ ಅವಕಾಶ ಕೋರಿದೆ. ಇನ್ನೊಂದೆಡೆ, ಸಾರ್ಕ್​ನಲ್ಲಿ ಅಫ್ಘನ್ ಪ್ರಾತಿನಿಧ್ಯಕ್ಕೆ ಪಾಕಿಸ್ತಾನ ಒತ್ತಡ ಹೇರಿದ ಕಾರಣ ಸಭೆಯೇ ರದ್ದುಗೊಂಡಿದೆ. ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಈ ಹಿಂದಿನ ನಾಗರಿಕ ಸರ್ಕಾರದ ಪ್ರತಿನಿಧಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಗ್ರ ಸಂಘಟನೆ ತಾಲಿಬಾನ್​ನ ಪ್ರತಿನಿಧಿಯನ್ನು ಅಫ್ಘನ್ ಪ್ರತಿನಿಧಿಯಾಗಿ ವಿಶ್ವಸಂಸ್ಥೆ ಸ್ವೀಕರಿಸಿದರೆ ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗುತ್ತದೆ.

ಸುಹೈಲ್ ಶಹೀನ್ ರಾಯಭಾರಿ?: ವಿಶ್ವಸಂಸ್ಥೆಯ 76ನೇ ಮಹಾಧಿವೇಶನದಲ್ಲಿ ಮಾತನಾಡುವುದಕ್ಕೆ ತನಗೆ ಅವಕಾಶ ನೀಡಬೇಕು ಎಂದು ಅಫ್ಘನ್ ಆಡಳಿತಾರೂಢ ತಾಲಿಬಾನ್ ಕೋರಿದೆ. ದೋಹಾದಲ್ಲಿರುವ ವಕ್ತಾರ ಸುಹೈಲ್ ಶಹೀನ್​ನನ್ನು ವಿಶ್ವಂಸ್ಥೆಯಲ್ಲಿನ ಅಫ್ಘಾನಿಸ್ತಾನದ ಪ್ರತಿನಿಧಿ ಎಂದು ಪರಿಗಣಿಸುವಂತೆ ತಾಲಿಬಾನ್ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಾಖಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರ್ರೆಸ್​ಗೆ ಪತ್ರ ಬರೆದಿದ್ದಾನೆ. ಈ ಪತ್ರ ತಲುಪಿರುವ ಬಗ್ಗೆ ಗುಟೆರ್ರೆಸ್ ವಕ್ತಾರ ಖಚಿತಪಡಿಸಿದ್ದಾರೆ. ನ್ಯೂಯಾರ್ಕ್​ನಲ್ಲಿ ವಿಶ್ವಸಂಸ್ಥೆಯ ಅಫ್ಘಾನಿಸ್ತಾನದ ಪ್ರತಿನಿಧಿಯಾಗಿ ಈ ಹಿಂದಿನ ಸರ್ಕಾರದ ಘುಲಾಮ್ ಇಸ್ಕಾಝೈ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲಿಬಾನಿಗಳು ಸರ್ಕಾರವನ್ನು ಪತನಗೊಳಿಸಿ ದೇಶವನ್ನು ವಶಪಡಿಸಿ ಕೊಂಡ ಬೆನ್ನಿಗೆ ಅವರ ನಡೆಯನ್ನು ಘುಲಾಮ್ ತೀವ್ರವಾಗಿ ಟೀಕಿಸಿದ್ದರು. ಈಗ ಹಕ್ ಬರೆದಿರುವ ಪತ್ರದಲ್ಲಿ ಘುಲಾಮ್ ಅಫ್ಘನ್ ಪ್ರತಿನಿಧಿ ಅಲ್ಲ. ಅವರ ಪ್ರತಿಪಾದನೆಗಳು ತಾಲಿಬಾನ್ ಪ್ರತಿಪಾದನೆ ಅಲ್ಲ ಎಂಬ ಸ್ಪಷ್ಟವಾಗಿ ಹೇಳಿದ್ದಾರೆ.

ಸೆ.27ರಂದು ತಾಲಿಬಾನ್ ಪ್ರತಿನಿಧಿಗೆ ಮಾತನಾಡಲು ಅವಕಾಶ ನಿಗದಿಯಾಗಿದೆ ಆದರೆ ಅಮೆರಿಕ, ರಷ್ಯಾ, ಚೀನಾ ಸೇರಿ ಒಂಬತ್ತು ರಾಷ್ಟ್ರಗಳ ಕ್ರೆಡೆನ್ಶಿಯಲ್ ಸಮಿತಿ ತಾಲಿಬಾನ್ ಮನವಿಯನ್ನು ಪರಿಶೀಲಿಸಿ ಸಮ್ಮತಿ ಸೂಚಿಸಬೇಕು. ಇದರ ಸಭೆ ಸದ್ಯ ನಿಗದಿಯಾಗಿಲ್ಲ.

ದಾಳಿಗೆ ಐವರ ಸಾವು: ಪೂರ್ವ ಅಫ್ಘನ್​ನಲ್ಲಿ ತಾಲಿಬಾನ್ ವಾಹನಗಳ ಮೇಲೆ ಬುಧವಾರ ಮತ್ತೆ ದಾಳಿ ನಡೆದಿದ್ದು ಕನಿಷ್ಠ 5 ಜನ ಮೃತಪಟ್ಟಿದ್ದಾರೆ. ಜಲಾಲಾಬಾದ್​ನಲ್ಲಿ ಸಶಸ್ತ್ರ ದುಷ್ಕರ್ವಿುಗಳು ಗುಂಡಿನ ದಾಳಿ ನಡೆಸಿದ ವೇಳೆ ಈ ದುರಂತ ಸಂಭವಿಸಿದೆ. ದಾಳಿಯ ಹೊಣೆಗಾರಿಕೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

ಸಾರ್ಕ್ ಸಭೆ ರದ್ದು: ಸಾರ್ಕ್ ಸಂಘಟನೆಯಲ್ಲಿ ಅಫ್ಘಾನಿಸ್ತಾನಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಪಾಕಿಸ್ತಾನ ಆಗ್ರಹಿಸಿತ್ತು. ಈ ಕಾರಣಕ್ಕೆ ಸಾರ್ಕ್ ವಿದೇಶಾಂಗ ಸಚಿವರ ಸಭೆ ರದ್ದಾಗಿದೆ. ಸಾರ್ಕ್ ಸಂಘಟನೆಯಲ್ಲಿ ಪಾಕಿಸ್ಸಾನ ಒಂಟಿಯಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಕಾರಣಕ್ಕೆ ನೇಪಾಳ ಸಭೆಯಿಂದ ಹಿಂದೆ ಸರಿದ ಕಾರಣ ಸಾರ್ಕ್ ಶೃಂಗ ನಡೆದಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net