ಶಿಷ್ಯವೇತನ ಪಡೆದು ಅಮೆರಿಕದಲ್ಲಿ ಓದುತ್ತಿದ್ದಾಕೆ ಭಾರತದಲ್ಲಿ ಬೀದಿಹೆಣವಾಗಿದ್ದು ಏಕೆ?

sudiksha
Published on

ಬುಲಂದಶಹರ್​: ಆಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ. 2018ರ 12ನೇ ತರಗತಿ ಪರೀಕ್ಷೆಯಲ್ಲಿ ಮಾನವೀಯಕಶಾಸ್ತ್ರ (Humanities) ಶೇ.98 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಳು. ಆಕೆಯ ಈ ಸಾಧನೆ ಮೆಚ್ಚಿಕೊಂಡು ಅಮೆರಿಕದವರು ಶಿಷ್ಯವೇತನ ನೀಡಿ, ತಮ್ಮಲ್ಲಿ ಉನ್ನತ ವ್ಯಾಸಂಗ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಆಕೆ ಸೋಮವಾರ ಬುಲಂದ್​ಶಹರ್​ನಲ್ಲಿ ಬೀದಿ ಹೆಣವಾಗಿದ್ದಾಳೆ!

ಮಸಾಚ್ಯುಸೆಟ್ಸ್​ನ ಬ್ಯಾಬ್​ಸನ್​ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುದೀಕ್ಷಾ ಭಾಟಿ (20) ಮೃತ ವಿದ್ಯಾರ್ಥಿನಿ. ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಈಕೆ ಅಮೆರಿಕದಿಂದ ಭಾರತಕ್ಕೆ ಮರಳಿದ್ದಳು. ಈ ತಿಂಗಳಲ್ಲಿ ಅಮೆರಿಕಕ್ಕೆ ವಾಪಸು ಹೋಗುವವಳಿದ್ದಳು. ಈಕೆ ತನ್ನ ಚಿಕ್ಕಪ್ಪನೊಂದಿಗೆ ಗೌತಮ್​ಬುದ್ಧ ನಗರದ ಸಮೀಪದ ತನ್ನ ಗ್ರಾಮದಿಂದ ಬುಲಂದ್​ಶಹರ್​ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬೈಕ್​ನಲ್ಲಿ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬೈಕ್​ನಿಂದ ಬಿದ್ದ ಆಕೆಯ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಚುಡಾಯಿಸುವಿಕೆ ಇದಕ್ಕೆ ಕಾರಣ: ಬುಲಂದ್​ಶಹರ್​ನ ಹೊರವಲಯದಿಂದ ನಾಲ್ವರು ಕಿಡಿಗೇಡಿಗಳು ತಮ್ಮ ಬೈಕ್​ನಲ್ಲಿ ಸುದೀಕ್ಷಾ ಭಾಟಿ ತನ್ನ ಚಿಕ್ಕಪ್ಪನೊಂದಿಗೆ ಬರುತ್ತಿದ್ದ ಬೈಕ್​ ಅನ್ನು ಹಿಂಬಾಲಿಸಲು ಆರಂಭಿಸಿದ್ದರು. ಆಕೆಗೆ ಅಶ್ಲೀಲವಾಗಿ ಸನ್ನೆ ಮಾಡುತ್ತಾ ಚುಡಾಯಿಸಲಾರಂಭಿಸಿದರು. ಅಲ್ಲದೆ, ಬೇಕೆಂದೇ ವೇಗವಾಗಿ ಹೋಗುವುದು, ಬೈಕ್​ ಅನ್ನು ನಿಧಾನ ಮಾಡುವುದು, ಬೈಕ್​ನಲ್ಲಿ ಸ್ಟಂಟ್​ಗಳನ್ನು ಮಾಡುವುದನ್ನು ಮಾಡುತ್ತಿದ್ದರು.

ಇದರಿಂದ ಹೆದರಿದ ಅವರ ಚಿಕ್ಕಪ್ಪ ಬೈಕ್​ ಅನ್ನು ನಿಧಾನ ಮಾಡಿದ್ದರು. ಆದರೂ ಯುವಕರ ಉಪಟಳ ನಿಂತಿರಲಿಲ್ಲ. ಇವರನ್ನು ಗಮನಿಸಿಕೊಂಡು ಬೈಕ್​ ಚಲಾಯಿಸುತ್ತಿದ್ದ ಅವರು ಒಂದೆಡೆ ನಿಧಾನ ಮಾಡಿದಾಗ, ಇವರ ಬೈಕ್​ನ ಹಿಂದೆ ಸ್ಟಂಟ್​ ಮಾಡಿಕೊಂಡು ಬರುತ್ತಿದ್ದ ಬೈಕ್​ ಸವಾರ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಸುದೀಕ್ಷಾ ಭಾಟಿ ಮತ್ತು ಆಕೆಯ ಚಿಕ್ಕಪ್ಪ ಇಬ್ಬರೂ ಬೈಕ್​ನಿಂದ ಎಗರಿ ಬಿದ್ದಿದ್ದಾರೆ.

ದುರದೃಷ್ಟವಶಾತ್​ ಸುದೀಕ್ಷಾ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತವಾದ ಗಾಬರಿಯಲ್ಲಿದ್ದ ಸುದೀಕ್ಷಾ ಅವರ ಚಿಕ್ಕಪ್ಪ ತಮಗೆ ಡಿಕ್ಕಿ ಹೊಡೆದ ಬೈಕ್​ನ ನೋಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳಲು ವಿಫಲರಾಗಿದ್ದಾರೆ.

ತಿಪ್ಪೆ ಸಾರಿಸುತ್ತಿದ್ದಾರೆ ಪೊಲೀಸರು: ಬುಲಂದ್​ಶಹರ್​ ಪೊಲೀಸರು ಸೂಕ್ತ ತನಿಖೆ ನಡೆಸುವ ಬದಲು, ಪಕರಣ ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ. ​ಅತಿವೇಗವಾಗಿ ಹೋಗುತ್ತಿದ್ದ ಸುದೀಕ್ಷಾ ಅವರ ಚಿಕ್ಕಪ್ಪ ತಮ್ಮೆದುರು ಹೋಗುತ್ತಿದ್ದ ಬೈಕ್​ ಸವಾರ ಬೈಕ್​ನ ವೇಗ ತಗ್ಗಿಸಿದ್ದನ್ನು ಗಮನಿಸದೆ ಆ ಬೈಕ್​ಗೆ ಡಿಕ್ಕಿ ಹೊಡೆದು ಈ ಅಪಘಾತವಾಗಿರುವುದಾಗಿ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net