

ಕೋಲಾರ: ಅಧಿಕಾರಿಗಳು ಕಾನೂನಡಿ ಕಾರ್ಯನಿರ್ವಹಿಸಿದಾಗ ಗೌರವ ಉಳಿಯುತ್ತದೆ. ಅದು ಬಿಟ್ಟು ಒತ್ತಡಗಳಿಗೆ ಮಣಿದು ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಅಪಾಯಕ್ಕೆ ಒಳಗಾಗಬೇಕಾದೀತು ಎಂದು ರಾಜ್ಯ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಲಯಗಳ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಎಚ್ಚರಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಲಯಗಳು, ಕಂದಾಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯಿದೆಗಳ ಕುರಿತಾಗಿ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಸಮಸ್ಯೆ ಎದುರಾಗುವ ಮುಂಚೆಯೇ ಮುನ್ನೆಚ್ಚರಿಕೆ ಕೈಗೊಳ್ಳುತ್ತಾನೆ. ಅದೇ ರೀತಿ ಸರ್ಕಾರಿ ಇಲಾಖಾಧಿಕಾರಿಗಳು ಸರ್ಕಾರಿ ಅಸ್ತಿಗಳನ್ನು ರಕ್ಷಣೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಅಸ್ತಿಗಳನ್ನು ರಕ್ಷಣೆ ಮಾಡಲು ಬ್ರಿಟಿಷ್‌ರ ಕಾಲದಿಂದಲೂ ಕಾಯಿದೆ, ಕಾನೂನುಗಳಿವೆ. ಅದರೂ ಸಹ ಒತ್ತುವರಿ ನಡೆಯುತ್ತಲೇ ಇದೆ. ಆರಂಭದಲ್ಲಿ ಒತ್ತುವರಿ ಗುರುತಿಸುತ್ತಿರಲಿಲ್ಲ. ದೂರು ದಾಖಲಾಗುತ್ತಿರಲ್ಲ. ಇನ್ನೂ ಕೆಲ ಪ್ರಕರಣಗಳಲ್ಲಿ ದೂರು ದಾಖಲಾದರೆ ದಾಖಲೆಗಳು ಇಲ್ಲದೆ ತಡವಾಗುತ್ತಿತ್ತು. ಹಾಗಾಗಿ ಜಾಗ ಒತ್ತುವರಿಯಾಗಿ ಸಮಸ್ಯೆ ಎದುರಿಸುವ ಮೊದಲೇ ಒತ್ತುವರಿ ತಡೆಯಲು ಮುಂದಾಗಬೇಕು ಎಂದರು.
ಎಲ್ಲ ಇಲಾಖೆಗಳಿಗೆ ಕಂದಾಯ ಇಲಾಖೆಯೇ ಮಾತೃ. ಇತ್ತೀಚಿನ ದಿನಗಳಲ್ಲಿ ಸ್ಮಶಾನಕ್ಕಾಗಿ ಖÁಸಗಿ ಜಾಗ ಖರೀದಿ ಮಾಡಿ ಮೀಸಲಿರಿಸುವ ಪರಿಸ್ಥಿತಿ ಎದುರಾಗಿದೆ. ಮೊದಲಿಂದಲೇ ಸರ್ಕಾರಿ ಜಮೀನುಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
* ಪ್ರಚೋದನೆ ಎಂದೇ ಪರಿಗಣನೆ
ಈಗ ಸ್ಥಿರಾಸ್ತಿ ಬೆಲೆ ಗಗನಕ್ಕೇರಿದ್ದು, ಭೂ ಕಬಳಿಕೆ ಜಾಸ್ತಿಯಾಗುತ್ತಿದೆ. ಅಧಿಕಾರಿ, ಸಿಬ್ಬಂದಿ ಮೊದಲು ಅಸ್ತಿ ಎಷ್ಟಿದೆ? ಎಂಬುದನ್ನು ಗುರುತಿಸಿಕೊಳ್ಳಿ. ಅದನ್ನು ರಕ್ಷಣೆ ಮಾಡಲು ಕ್ರಮವಹಿಸಬೇಕು. ಒತ್ತುವರಿ ಆಗುತ್ತಿರುವುದು ಗೊತ್ತಾಗಿಯೂ ಕ್ರಮವಹಿಸಲು ಮುಂದಾಗದಿದ್ದರೆ ಸಂಬAಧಪಟ್ಟ ಅಽಕಾರಿಯು ಅಕ್ರಮ ಒತ್ತುವರಿಗೆ ಪ್ರಚೋದನೆ ಮಾಡಿದ್ದಾರೆ ಎಂದು ಪರಿಗಣಿಸಿ ದೂರು ದಾಖಲಿಸಬಹುದು. ಗೊತ್ತಿದ್ದು, ನಿರ್ಲಕ್ಷ್ಯ ತೋರಿದರೆ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿ.ಎ.ಪಾಟೀಲ್ ಎಚ್ಚರಿಸಿದರು.
* ದೇಶದ ಗಮನ ಸೆಳೆದ ಒತ್ತುವರಿ ತೆರವು
ಯಾವ ರಾಜ್ಯದಲ್ಲೂ ಆಗದ ಕೆಲಸವನ್ನು ಕೋಲಾರದಲ್ಲಿ ಅರಣ್ಯ, ಜಿಲ್ಲಾಡಳಿತ ಮಾಡಿದೆ. 2000 ಎಕರೆಗೂ ಹೆಚ್ಚು ಒತ್ತುವರಿ ತೆರವುಗೊಳಿಸುವ ಮೂಲಕ ದೇಶದ ಗಮನ ಸೆಳೆದಿದೆ. ಅಷ್ಟು ದೊಡ್ಡ ಮಟ್ಟದಲ್ಲಿ ಒತ್ತುವರಿ ತೆರವುಗೊಳಿಸುವುದು ಸುಲಭದ ಮಾತಲ್ಲ. ಅದರ ಮೌಲ್ಯವು ಕೋಟಿಗಟ್ಟಲೇ ಇರುತ್ತದೆ. ಇದು ನಿಜಕ್ಕೂ ಬೇರೆಗೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಬಿ.ಎ.ಪಾಟೀಲ್, ಸರ್ಕಾರಿ ಜಮೀನನ್ನು ಸಂರಕ್ಷಿಸಿ, ಸರ್ಕಾರದ ಅಸ್ತಿಯಾಗಿ ಗಟ್ಟಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ. ಸರ್ಕಾರಿ ಆಸ್ತಿಗಳನ್ನು ಅಧಿಕಾರಿಗಳು ಮಕ್ಕಳಂತೆ ಜೋಪಾನ ಮಾಡಬೇಕು ಎಂದರು.
* ಅಧಿಕಾರಿ, ಸಿಬ್ಬಂದಿ ಕೊರತೆ ನಡುವೆಯೂ ಪ್ರಗತಿ
ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಶೇ.30ರಷ್ಟು ಅಧಿಕಾರಿ, ಸಿಬ್ಬಂದಿ ಕೊರತೆಯಿದ್ದರೂ ಸಾರ್ವಜನಿಕರ ಸೇವೆ ಮಾಡಲಾಗುತ್ತಿದೆ. ಅದರಲ್ಲೂ ಇಲಾಖೆ ಪ್ರಗತಿಯಲ್ಲಿ ರಾಜ್ಯಮಟ್ಟದಲ್ಲಿ ಜಿಲ್ಲೆ ಮುಂದಿದೆ. ಒಂದೊಂದು ಇಲಾಖೆಗೆ ಪ್ರತ್ಯೇಕ ಕಾಯಿದೆಗಳಿದ್ದು, ಅದರಡಿಯಲ್ಲೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕಾರ್ಯಾಗಾರ ನಿಮ್ಮಿತ ಕಚೇರಿಗೆ ಹೋಗುವಷ್ಟಿಲ್ಲ ಎಂಬ ಭಾವನೆ ಬೇಡ. ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು. ಈ ಮೂಲಕ ಲೋಪಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಮಿನಿಸ್ಟರ್, ಎಂಎಲ್‌ಎ ಒತ್ತಡ ತಂದು ಕೆಲಸ ಮಾಡಿಸುತ್ತಾರೆ, ಎಲ್ಲವೂ ಅದ ನಂತರ ನ್ಯಾಯಾಲಯದ ಮುಂದೆ ಕೈಕಟ್ಟಿ ನಿಲ್ಲಬೇಕು. ತಾಯಿ ಹೃದಯ ಇಟ್ಟುಕೊಂಡು ಕೆಲಸ ಮಾಡಿದಾಗ, ಆರೋಪ ಕೇಳಿ ಬಂದಾಗ ಧೈರ್ಯದಿಂದ ಎದುರಿಸಬಹುದು ಎಂದು ತಿಳಿಸಿದರು.
* ಜಿಲ್ಲೆಗೆ ಅಧಿಕಾರಿಗಳು ಬರಲು ಹಿಂದೇಟು
ಫ್ರೂಟ್ ಐಡಿ ನೋಂದಣಿ ಮಾಡಿಸಿ ರೈತರಿಗೆ ಪರಿಹಾರವನ್ನು ಸಕಾಲಕ್ಕೆ ಸಿಗುವಂತೆ ಮಾಡಿದ್ದೇವೆ. ಪಹಣಿಗೆ ಆಧಾರ್ ಲಿಂಕ್ ಮಾಡುವಲ್ಲಿ ಶೇ.92ರಷ್ಟು ಸಾಧನೆಯಾಗಿದೆ. ಲ್ಯಾಂಡ್ ಬೀಟ್ ನೋಂದಣಿಯಲ್ಲಿ 34000 ಸರ್ಕಾರಿ ಅಸ್ತಿಗಳನ್ನು ಜೀಯೋ ಫೆನ್ಸಿಂಗ್ ಮಾಡಲಾಗಿದೆ. ನಾಡಕಚೇರಿಗಳಿಂದ ೪೮ ಸೇವೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿದ್ದು, ಜನ ಜಾಗೃತರಿದ್ದಾರೆ. ಇಲ್ಲಿ ಅಪ್ಲಿಕೇಷನ್ ಕೊಟ್ಟು ತಡವಾದರೆ ಸಿಎಂ, ಲೋಕಾಯುಕ್ತ, ಮಿನಿಸ್ಟರ್ ಹೀಗೆ ಕದಗಳನ್ನು ತಟ್ಟುತ್ತಾರೆ. ಇದು ಅಧಿಕಾರಿಗಳಿಗೆ ಎಚ್ಚರಿಕೆಯಾಗುತ್ತದೆ ಎಂದರು. ಕೋಲಾರ ಜಿಲ್ಲೆಗೆ ಅಧಿಕಾರಿಗಳು ಬರಲು ಮುಂದಾಗುವುದಿಲ್ಲ. ಜಿ.ಪಂ ಸಿಇಒ, ಲೆಕ್ಕಾಧಿಕಾರಿ ಸೇರಿ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇವೆ. ಇರುವ ಅಧಿಕಾರಿ, ಸಿಬ್ಬಂದಿ ಸೇವಾ ಮನೋಭಾವ ಇಟ್ಟುಕೊಂಡಿದ್ದಾರೆ. ಕಾರ್ಯವೈಖರಿ ಬದಲಾವಣೆಯಿಂದ ಪ್ರಗತಿ ಸಾಧನೆಯಾಗುತ್ತಿದೆ ಎಂದು ಅಕ್ರಂ ಪಾಷಾ ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಹೊಸಮನಿ, ಎಸ್ಪಿ ಬಿ.ನಿಖಿಲ್, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಕೆ.ಸಂಜಯ್, ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಎಚ್.ಅಶ್ವತ್ಥನಾರಾಯಣಗೌಡ, ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿಎಸ್, ತಹಸೀಲ್ದಾರ್ ಡಾ.ನಯನಾ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ ಹಾಜರಿದ್ದರು.