

ಹೊಳೆನರಸೀಪುರ : ಸರ್ಕಾರ ಉಚಿತವಾಗಿ ಒದಗಿಸುತ್ತಿರುವ ಯೋಜನೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮ ಲಿಂಗೇಗೌಡ ಹೇಳಿಸಿದರು.
ಶುಕ್ರವಾರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ 2025 -26 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
2025-26ನೇ ಶೈಕ್ಷಣಿಕ ವರ್ಷದ ಆರಂಭೋತ್ಸವ ಶುಕ್ರವಾರದಿಂದ ಆರಂಭವಾಗಿದೆ. ಇನ್ನು ಮುಂದೆ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯ ಪುಸ್ತಕಗಳನ್ನು ಪಡೆದು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್, ಮಧ್ಯಾಹ್ನದ ಬಿಸಿ ಊಟದ ಯೋಜನೆ, ಬೆಳಗ್ಗೆ ಶಾಲೆಗೆ ಬಂದಾಗ ಹಾಲು ಹಾಗೂ ಮಧ್ಯಾಹ್ನದ ಬಿಸಿ ಊಟದ ಜತೆಯಲ್ಲಿ ಬಾಳೆಹಣ್ಣು, ಮೊಟ್ಟೆ ಸರ್ಕಾರಿ ಶಾಲೆಗಳಿಗೆ ಸೇರಿದ ಎಲ್ಲ ಸೌಲಬ್ಯಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೊರಕುತ್ತಿದೆ. ಜತೆಗೆ ವಿದ್ಯಾರ್ಥಿ ವೇತನದ ಸೌಲಭ್ಯವೂ ಇರುತ್ತದೆ. ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದು ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದು, ಸಂಘ ಸಂಸ್ಥೆಗಳ ಸಮಾಜಮುಖಿ ಸೇವೆ, ಶಾಲಾ ಶಿಕ್ಷಕರು, ಉಪ ಪ್ರಾಂಶುಪಾಲರು, ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು, ಪಾಲಕರ ಕಾಳಜಿ ಮತ್ತು ಕರ್ತವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತುತ ಸಾಲಿಗೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. 8ನೇ ತರಗತಿಗೆ ದಾಖಲಾತಿ ಆಂದೋಲನ ಆರಂಭವಾಗಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 40 ಮಕ್ಕಳು ಸರ್ಕಾರಿ ಶಾಲೆಗೆ ಬಂದು ಸೇರಿರುವುದು ಹೆಮ್ಮೆಯ ವಿಷಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಾದ ಅರುಣಾ ಮತ್ತು ಮಾನ್ಯಾ ಎಂಬುವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ಸೌಲಭ್ಯ ಪಡೆಯಲು ಆಯ್ಕೆಯಾಗಿದ್ದಾರೆ. ಈ ಶಾಲೆಯಲ್ಲಿ 400 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು ನುರಿತ ಶಿಕ್ಷಕರು ಇದ್ದಾರೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಫಲಿತಾಂಶ ಶೇ.80ರಷ್ಟು ಬರಲು ಎಲ್ಲ ಸಿಬ್ಬಂದಿ ವರ್ಗದವರ ವ್ಯವಸ್ಥಿತವಾದ ಯೋಜನೆ ಬದ್ಧವಾದ ಕಾರ್ಯ ಹಾಗೂ ಪ್ರಸಕ್ತ ವರ್ಷ 625 ಅಂಕಗಳನ್ನು ಗಳಿಸುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿ ಶುಭ ಕೋರಲಾಯಿತು.
ಎಸ್‌ಡಿಎಂಸಿ ಸದಸ್ಯ ಜಯಪ್ರಕಾಶ್, ನಿವೃತ್ತ ಪ್ರಾಂಶುಪಾಲ ನಂಜೇಗೌಡ, ಪಾಲಕರು, ಶಿಕ್ಷಕರು , ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಕರಾದ ಪಾಲಾಕ್ಷ, ರವಿಶಂಕರ್ ಮೂರ್ತಿ ಇದ್ದರು.