

ಭದ್ರಾವತಿ: ನಗರಸಭೆ ವಾರ್ಡ್ ವ್ಯಾಪ್ತಿಯಲ್ಲಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸಚಿಕಿತ್ಸೆ ನಡೆಸಲು ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಹೆಚ್ಚಿನ ಅನುದಾನ ನೀಡಲು ಜಿಲ್ಲೆಯ ಸಂಸದರು ಸಚಿವ ಸಂಪುಟದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರಸಭಾ ಪ್ರಭಾರ ಅಧ್ಯಕ್ಷ ಎಂ.ಮಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹುಚ್ಚುನಾಯಿಗಳು ಸಾರ್ವಜನಿಕರಿಗೆ ಕಚ್ಚುತ್ತಿವೆ. ವಾರ್ಡ್ ಸದಸ್ಯರು ಜನರಿಂದ ಬಯ್ಯಿಸಿಕೊಳ್ಳುವುದೆ ಆಗಿದೆ ಎಂದು ಸದಸ್ಯ ಸುದೀಪ್ ಪ್ರಶ್ನಿಸಿದರು. ಹಿನ್ನೆಲೆಯಲ್ಲಿ ಚನ್ನಪ್ಪ, ಟಿಪ್ಪು, ಕದಿರೇಶ್, ವಿಜಯಮ್ಮ ಧ್ವನಿಗೂಡಿಸಿ, ಈ ಸಮಸ್ಯೆ ಎಲ್ಲ ವಾರ್ಡ್‌ಗಳಲ್ಲೂ ಇದೆ. ಸರ್ಕಾರದಿಂದ ಬರುವ ಅನುದಾನ ಸಾಕಾಗುವುದಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಈ ಕುರಿತು ಜಿಲ್ಲೆಯ ಸಂಸದರು ಕಲಾಪದಲ್ಲಿ ಚರ್ಚಿಸಲಿ ಎಂದು ಸಹಮತ ವ್ಯಕ್ತಪಡಿಸಿದರು.
ನಾಯಿಗಳೇನು ವೋಟು ಹಾಕುವುದಿಲ್ಲ. ವೋಟು ಹಾಕುವವರನ್ನೇ ಕಚ್ಚುತ್ತಿವೆ. ಬೆಳಗ್ಗೆ 5ಗಂಟೆಗೆ ಮಹಿಳೆಯರು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಾರೆ. ಅವರು ನಾಯಿಯಿಂದ ಕಚ್ಚಿಸಿಕೊಂಡು ಮನೆಗೆ ಬರುವುದು ಬೇಡ. ರಸ್ತೆ , ಚರಂಡಿ ಕಾಮಗಾರಿ ಬಿಟ್ಟು ನಾಯಿ ಹಿಡಿಯಿರಿ ಎಂದು ವಿಜಯಮ್ಮ ಮಾತು ಮುಂದುವರಿಸಿದಾಗ ಸದಸ್ಯ ಟಿಪ್ಪು ಪ್ರತಿಕ್ರಿಯಿಸಿ, 4 ಎಕರೆ ಜಾಗ ತೆಗೆದುಕೊಂಡು ಬೀದಿ ನಾಯಿಗಳ ಸಂತತಿ ಕೊನೆಗೊಳಿಸಿ. ಈ ಬಾರಿ ಬಜೆಟ್‌ನಲ್ಲಿ ಹಣ ಸಂಗ್ರಹಿಸುವ ಬಗ್ಗೆಯೂ ಚಿಂತನೆ ನಡೆಸಿ ಎಂದರು.
ನಗರಸಭೆ ಪರಿಸರ ಅಭಿಯಂತ ಪ್ರಭಾಕರ್ ಮಾತನಾಡಿ, ಬೀದಿನಾಯಿಗಳನ್ನು ಸಾಯಿಸಲು ಅವಕಾಶವಿಲ್ಲ. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮಾತ್ರ ಅವಕಾಶವಿದೆ. ವರ್ಷಕ್ಕೆ 1 ಸಾವಿರ ನಾಯಿಗಳಿಗೆ ಮಾತ್ರ ಸಂತಾನಹರಣ ಶಸ ಚಿಕಿತ್ಸೆ ಮಾಡಲಾಗುತ್ತಿದೆ. ಸುಮಾರು 7 ಸಾವಿರ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಅವಕಾಶವಿದೆ. ಅನುದಾನ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆಯ ಪ್ರಮಾಣ ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಡಾ.ರಾಜ್‌ಕುಮಾರ್ ನಾಮಲಕ ಕಡ್ಡಾಯ: ನಗರದ ಅಂಡರ್‌ಬ್ರಿಡ್ಜ್‌ನಿಂದ ಎಪಿಎಂಸಿವರೆಗೂ ಹಾದು ಹೋಗಿರುವ ಚನ್ನಗಿರಿ ರಸ್ತೆಯನ್ನು ಡಾ.ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ 12 ವರ್ಷ ಕಳೆದಿದ್ದರೂ ಯಾವುದೇ ಅಂಗಡಿ ಮಾಲೀಕರು ಇದುವರೆಗೂ ನಾಮಲಕಗಳಲ್ಲಿ ರಾಜ್‌ಕುಮಾರ್ ರಸ್ತೆ ಎಂದು ಬರೆಸಿಲ್ಲ. ಯಾವ ಅಂಗಡಿ ಮಾಲೀಕರು ಹೆಸರು ಬರೆಸಿಲ್ಲವೋ ಅವರ ಅಂಗಡಿ ಮುಂಭಾಗ ನಗರಸಭೆಯಿಂದ ನಿತ್ಯ ಕಸ ತೆಗೆಯಬಾರದು, ಬದಲಾಗಿ ಸಂಗ್ರಹಿಸಿದ ಕಸವನ್ನು ಅವರ ಅಂಗಡಿಯ ಮುಂಭಾಗವೇ ಸುರಿದು ಬರುವ ಇಲ್ಲವೇ ಅಂಗಡಿಗೆ ಬೀಗ ಹಾಕುವ ನಿರ್ಣಯವನ್ನು ನಗರಸಭೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸದಸ್ಯ ಬಿ.ಕೆ.ಮೋಹನ್, ಬಿ.ಟಿ.ನಾಗರಾಜ್ ಸಲಹೆ ನೀಡಿದರು. ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಮಾತನಾಡಿ, ನಾವೂ ಸಹ ಅಂಗಡಿ ಮಾಲೀಕರ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇವೆ. ಆದರೆ ಅವರು ಬರೆಸಿಲ್ಲ. ಸಭೆಯ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.