

ಶಿವಮೊಗ್ಗ: ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ತಳಮಟ್ಟದ ಮಾಹಿತಿಯನ್ನು ಕಲೆ ಹಾಕಿ ದಾಳಿ ನಡೆಸಬೇಕು. ಸಂಘಟಿತ ಅಪರಾಧ ತಡೆಯಲು ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.
ಡಿವೈಎಸ್ಪಿ, ಸಿಪಿಐ ಹಾಗೂ ಠಾಣಾಧಿಕಾರಿಗಳೊಂದಿಗೆ ಮಂಗಳವಾರ ಅಪರಾಧ ಪರಾಮರ್ಶನ ಸಭೆ ನಡೆಸಿದ ಅವರು, ಠಾಣಾ ವ್ಯಾಪ್ತಿಯಲ್ಲಿ ಗುಪ್ತ ಮಾಹಿತಿ ವ್ಯವಸ್ಥೆ ಬಲಪಡಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ, ಮೇಲಧಿಕಾರಿಗಳಿಗೆ ನೀಡಬೇಕು. ಪಿಐ ಹಾಗೂ ಎಸ್‌ಐ ಇದರ ಮೇಲ್ವಿಚಾರಣೆ ನೋಡಬೇಕೆಂದರು.
ತನಿಖೆಯಲ್ಲಿರುವ ಪ್ರಕರಣಗಳ ವಿಮರ್ಶೆ ನಡೆಸಬೇಕು. ಕಾಲಮಿತಿಯೊಳಗೆ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಬೇಕು. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲಿಸಬೇಕು. ಸಂಚಾರ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್, ಕ್ಯಾಟ್ ಐಸ್, ರೋಡ್ ಹಂಪ್ಸ್‌ಗಳನ್ನು ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಬೇಕೆಂದರು. ಠಾಣೆಗಳ ಆವರಣದಲ್ಲಿರುವ ವಾರಸುದಾರರು ಸುಪರ್ದಿಗೆ ಪಡೆಯದೇ ಇರುವ, ತನಿಖೆಯಲ್ಲಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತು ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿನ ವಾಹನಗಳನ್ನು ವಿಂಗಡಿಸಿ, ವಿಲೇವಾರಿ ಮಾಡಬೇಕೆಂದು ತಿಳಿಸಿದರು.
ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿಗಳಾದ ಟಿ.ಪಿ.ಕೃಷ್ಣಮೂರ್ತಿ, ಬಾಬು ಅಂಜನಪ್ಪ, ಎಂ.ಸುರೇಶ್, ಟಿ.ಗೋಪಾಲಕೃಷ್ಣ ಟಿ.ನಾಯಕ್, ಕೇಶವ್, ಗಜಾನನ ವಾಮನ ಸುತಾರ ಮುಂತಾದವರಿದ್ದರು.