ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ

Talkin ahammad
Published on

ಶಿವಮೊಗ್ಗ: ನಗರದೊಳಗೆ ಬರುವ ಹಾಗೂ ಇಲ್ಲಿಂದ ಬೇರೆಡೆಗೆ ತೆರಳುವ ಲಾರಿ ಮತ್ತಿತರ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎ.ತಲ್ಕೀನ್ ಅಹಮದ್ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಲಾರಿಗಳಿವೆ. ಈ ಲಾರಿಗಳ ನಿಲುಗಡೆಯೇ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಪ್ರಾದೇಶಿಕ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿ ಲಾರಿ ನಿಲ್ಲಿಸಲು ಜಾಗ ಗುರುತಿಸಿ ಎಂದು ಕೋರಲಾಗಿದೆ. ಆದರೆ ಇದುವರೆಗೂ ಸೂಕ್ತ ವ್ಯವಸ್ಥೆಯಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಲಾರಿಗಳನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಲಾರಿ ಹಾಗೂ ಲಾರಿ ಬಿಡಿ ಭಾಗಗಳನ್ನು ಕಳ್ಳತನ ಮಾಡಲಾಗುತ್ತಿದೆ. ಲಾರಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿರುವ ನಿದರ್ಶನಗಳೂ ಇವೆ. ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ ಎಂದು ವಿವರಿಸಿದರು.

ಈ ಹಿಂದೆ ತ್ಯಾವರಚಟ್ನಹಳ್ಳಿಯಲ್ಲಿ ಟ್ರಕ್ ಟರ್ಮಿನಲ್‌ಗೆ ಜಿಲ್ಲಾಡಳಿತ ಜಾಗ ಗುರುತಿಸಿತ್ತು. ಬಳಿಕ ಯಾವ ತೀರ್ಮಾನ ತೆಗೆದುಕೊಂಡರು ಎಂಬದೇ ಗೊತ್ತಿಲ್ಲ. ಯಾವ ಸರ್ಕಾರವೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಈಗಲಾದರೂ ಜಿಲ್ಲಾಡಳಿತ ತಕ್ಷಣ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಕೆ.ಎನ್.ಭೋಜರಾಜ್, ರಾಜಣ್ಣ, ಶಿವಣ್ಣ, ಬಾಬು, ವಿನಯ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net