

ರಾಣೆಬೆನ್ನೂರ: ಖಾಸಗಿ ಬೀಜ ಕಂಪನಿಯವರು ಸ್ಥಳಿಯ ರೈತರಿಗೆ ಮೆಕ್ಕೆಜೋಳ ಬೀಜ ಉತ್ಪಾದನೆ ಮಾಡಲು 6 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿಸಿ ಇದೀಗ ಬೆಳೆ ಕಟಾವು ಮಾಡಿಕೊಳ್ಳಲು ಬಾರದೆ ಮೋಸ ಮಾಡುತ್ತಿದ್ದಾರೆ ಎಂದು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದ ರೈತರು ಸೋಮವಾರ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಹೈದರಾಬಾದ್ ಮೂಲಕ ಕೆಲ ಸೀಡ್ಸ್ ಕಂಪನಿಯವರು ಸ್ಥಳಿಯ ರೈತರಿಗೆ ಮೆಕ್ಕೆಜೋಳ ಬೀಜೋತ್ಪಾದನೆ ಮಾಡುವ ಸಲುವಾಗಿ ಬೀಜ ಹಾಗೂ ರಸಗೊಬ್ಬರ ಕೊಟ್ಟು ಬೆಳೆದು ಕೊಡಲು ಕರಾರು ಮಾಡಿಕೊಂಡಿದ್ದರು. ರೈತರು ಉತ್ಪಾದನೆ ಮಾಡುವ ಬೀಜವನ್ನು 2800 ರೂ. ಒಂದು ಕ್ವಿಂಟಾಲ್ನಂತೆ ಖರೀದಿ ಮಾಡುವುದಾಗಿ ಹೇಳಿದ್ದರು.
ಆದರೀಗ ರೈತರು ಸಂರ್ಪೂಣ ಬೆಳೆಗಳನ್ನು ಬೆಳೆದು ಸಿದ್ಧಪಡಿಸಿದ್ದಾರೆ. ಈ ಸಮಯದಲ್ಲಿ ಬೆಳೆ ಕಟಾವು ಮಾಡಿಕೊಂಡು ಹೋಗಬೇಕಾದ ಸೀಡ್ಸ್ ಕಂಪನಿಯವರು ಬರುತ್ತಿಲ್ಲ. ಇದರಿಂದ ರೈತರು ಶ್ರಮಪಟ್ಟು ಸೀಡ್ಸ್ ಬೆಳೆದಿರುವುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಅಲ್ಲದೆ ಲಾಂತರ ರೂ. ನಷ್ಟ ಎದುರಿಸುವ ಸಂಕಷ್ಟ ಎದುರಾಗಿದೆ.
ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸೀಡ್ಸ್ ಕಂಪನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತರಾದ ಮಲ್ಲಿಕ ಕಮದೋಡ, ರಾಜು ಚೌಡಕ್ಕಳವರ, ಜಯಣ್ಣ ಛಲವಾದಿ, ಸಿದ್ದಪ್ಪ ವಡ್ಡರ, ಹನುಮಂತಗೌಡ ಬಾಧಿ, ಶಂಕ್ರಪ್ಪ ಕೆರೂಡಿ, ಹನುಮಂತಪ್ಪ ರಾಹುತನಕಟ್ಟಿ, ಹನುಮಂತ ಸವಳಿ, ಗೊಣೇಪ್ಪ ವಡ್ಡರ, ಹನುಮಂತ ಕುರಬರ, ಸಂಜೀವ ರೆಡ್ಡಿ, ಹರೀಶ ಕೆಂಚರೆಡ್ಡಿ, ವಸಂತ ಹೊನ್ನತ್ತಿ ಮತ್ತಿತರರು ಉಪಸ್ಥಿತರಿದ್ದರು.