ಖಾಸಗಿ ಶಾಲೆ ವಿರುದ್ಧ ಕ್ರಮ ಕೈಗೊಳ್ಳಿ

basava nagi deva sharana
ಶ್ರೀ ಬಸವನಾಗಿದೇವ ಶರಣ
Published on

ಶಿವಮೊಗ್ಗ: ನಗರದ ಹೊರವಲಯದ ಖಾಸಗಿ ಶಾಲೆಯೊಂದರಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯ ಪಾಲಕರು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯ ಜಾತಿನಿಂದನೆ ಮಾಡಿ, ಮುಂದಲೆ ಕೂದಲನ್ನು ಕತ್ತರಿಸಿರುವುದು ಅಮಾನವೀಯ ಎಂದು ಚಿತ್ರದುರ್ಗ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು ಬೇಸರ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ ಮಗುವಿನ ಬಾಕಿ ಶುಲ್ಕ 5 ಸಾವಿರ ರೂ. ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಪರೀಕ್ಷೆ ಬರೆಯುವುದಕ್ಕೂ ಅವಕಾಶ ನೀಡದೆ ಮಗುವಿನ ಭವಿಷ್ಯವನ್ನು ಸಂಸ್ಥೆ ಹಾಳುಮಾಡಿದೆ. ಅಲ್ಲಿ ನಡೆದ ಘಟನೆಯಿಂದ ಅಸ್ಪಶ್ಯತೆ ಈಗಲೂ ಜೀವಂತವಾಗಿದೆ ಎಂಬುದು ಸಾಬೀತಾಗಿದೆ. ಮಗುವಿನ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಸಂಚು ನಡೆದಿದೆ. ತನಿಖೆಯಲ್ಲಿ ಅಧಿಕಾರಿಗಳು ಸಾಕ್ಷೃ ನಾಶ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಘಟನೆ ಬಗ್ಗೆ ಪ್ರಾಮಾಣಿಕವಾಗಿ ತನಿಖೆಗೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಾಮಾಜಿಕ ನ್ಯಾಯಕ್ಕಾಗಿ ಛಲವಾದಿ ಮಹಾಸಭಾದಿಂದ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಛಲವಾದಿ ಸಮಾಜದ ಪ್ರಮುಖರಾದ ಜವರಯ್ಯ, ಮುತ್ತುರಾಜ್, ಆನಂದ್, ಅರುಣ್‌ಕುಮಾರ್, ಜಬೀವುಲ್ಲಾ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net