

ನವದೆಹಲಿ: ಕರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಮೂಲಕ ಗುಣ ಮಾಡುವ ಪ್ರಯೋಗ ಶುರುವಾದದ್ದೇ ತಡ, ತಾವೂ ಪ್ಲಾಸ್ಮಾ ದಾನ ಮಾಡುವುದಾಗಿ ತಬ್ಲಿಘಿ ಜಮಾತ್ ಸದಸ್ಯರು ಮುಂದೆ ಬಂದಿದ್ದಾರೆ. ಈ ಮೂಲಕ ತಾವು ಕರೊನಾ ವಾರಿಯರ್ಸ್ ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಈ ಹೇಳಿಕೆ ಕುರಿತು ಕಿಡಿ ಕಾರಿರುವ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ಕರೊನಾ ಹರಡುವ ಪಾಪ ಮಾಡಿರುವುದೂ ಅಲ್ಲದೇ ಕರೊನಾ ವಾರಿಯರ್ಸ್ ಎಂದು ಬೇರೆ ಹೇಳಿಕೊಳ್ಳುತ್ತಿದ್ದಾರೆ. ಕರೊನಾ ಹರಡುವ ಅಪರಾಧ ಮಾಡಿರುವ ಅವರಿಗೆ ನಾಚಿಕೆಯಾಗಬೇಕು. ಅವರ ಹೇಳಿಕೆ ತೀರಾ ವಿಚಿತ್ರವಾಗಿದೆ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
'ಚೋರಿ ಔರ್ ಸೀನಾ ಜೋರಿ' ಎನ್ನುವ ಹಾಗೆ ಕಳ್ಳತನ ಮಾಡಿದ್ದೂ ಅಲ್ಲದೇ ತಮಗೆ ತಾವೇ ಭೇಷ್ ಎನ್ನುತ್ತಿದ್ದಾರೆ. ಈ ಮೂಲಕ ಕರೊನಾ ವಾರಿಯರ್ಸ್ ಎಂಬ ಹೆಸರಿಗೆ ಕಳಂಕ ತರುತ್ತಿದ್ದಾರೆ. ತಮ್ಮ ಕುಕೃತ್ಯಕ್ಕೆ ನಾಚಿಕೆ ಪಡುವ ಬದಲು ನಿಜವಾಗಿ ಕರೊನಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಸ್ಗೆ ಅವಮಾನ ಮಾಡುತ್ತಿದ್ದಾರೆ ಎಂದು ನಖ್ವಿ ಹೇಳಿದ್ದಾರೆ.
ಕರೊನಾ ಸೋಂಕಿನಿಂದ ಗುಣ ಮುಖರಾದವರ ದೇಹದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ. ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸಲಾಗುತ್ತದೆ. ಕರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಅರ್ಹರು. ಇದೇ ಪ್ಲಾಸ್ಮಾ ಥೆರಪಿ. ಈ ಥೆರಪಿಗೆ ಕರೊನಾ ಸೋಂಕಿನಿಂದ ಗುಣ ಮುಖರಾದವರ ಹುಡುಕಾಟದಲ್ಲಿ ವೈದ್ಯರು ಇರುವ ಹಿನ್ನೆಲೆಯಲ್ಲಿ ತಾವು ಪ್ಲಾಸ್ಮಾ ದಾನ ಮಾಡುವುದಾಗಿ 350ಕ್ಕೂ ತಬ್ಲಿಘಿಗಳು ಹೇಳಿದ್ದಾರೆ ಎನ್ನಲಾಗಿದೆ. ಈಗಾಗಲೇ 25 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)