ತಬ್ಲಿಘಿ ಮುಖ್ಯಸ್ಥನಿಗೆ ಕರೊನಾ ಸೋಂಕು ಇದೆಯೆ? ವರದಿ ಏನು ಹೇಳಿದೆ?

moulanafinal
Published on

ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಶಬ್ದ ಎಂದರೆ ತಬ್ಲಿಘಿ. ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದ ತಬ್ಲಿಘಿಗಳ ಬಗ್ಗೆ ವಾದ- ಪ್ರತಿವಾದಗಳ ಮಹಾಪೂರವೇ ಹರಿದಿತ್ತು.

ಲಾಕ್​ಡೌನ್​ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಹಿನ್ನೆಲೆಯಲ್ಲಿ ಇಡೀ ದೇಶದ ತುಂಬ ಈ ಘಟನೆ ಆತಂಕ ಸೃಷ್ಟಿ ಮಾಡಿತ್ತು. ಈಗಲೂ ಈ ಘಟನೆ ಸದ್ದು ಮಾಡುತ್ತಲೇ ಇದೆ. ದೇಶದಲ್ಲಿ ಕರೊನಾ ಸೋಂಕು ಹರಡಲು ಕೆಲವು ತಬ್ಲಿಘಿಗಳೇ ಕಾರಣ ಎಂಬ ಗಂಭೀರ ಆರೋಪವೂ ಎಲ್ಲೆಡೆ ಕೇಳಿ ಬಂದಿವೆ.

ಅದೇ ಇನ್ನೊಂದೆಡೆ, ನಿಜಾಮುದ್ದೀನ್​ ಘಟನೆಯ ನಂತರ ತಲೆಮರೆಸಿಕೊಮಡಿದ್ದ ತಬ್ಲಿಘಿ ಜಮಾತ್‌ ಮುಖ್ಯಸ್ಥ ಮೌಲಾನಾ ಸಾದ್‌ ಹುಡುಕಾಟವೂ ಬಲು ಜೋರಾಗಿಯೇ ನಡೆದಿತ್ತು. ಅನೇಕ ತಬ್ಲಿಘಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೌಲಾನಾ ಸಾದ್​ಗೂ ಸೋಂಕು ಇರಬಹುದೆ ಎಂಬ ಸಂದೇಹ ಬಲವಾಗಿತ್ತು.

ಆದರೆ ಇದೀಗ ಬಂದಿರುವ ವರದಿಯ ಪ್ರಕಾರ, ಮೌಲಾನಾ ಸಾದ್‌ಗೆ ಸೋಂಕು ದೃಢಪಟ್ಟಿಲ್ಲ. ದೆಹಲಿ ಪೊಲೀಸ್‌ ಕ್ರೈಂ ಬ್ರಾಂಚ್‌ ಸೂಚನೆಯ ಮೇರೆಗೆ ಪರೀಕ್ಷೆಗೆ ಒಳಪಟ್ಟ ಸಾದ್​ ಕುರಿತಂತೆ ವರದಿ ಬಂದಿದ್ದು, ಸೋಂಕು ನೆಗೆಟಿವ್​ ಬಂದಿದೆ ಎಂದಿದ್ದಾರೆ ಅವರ ಪರ ವಕೀಲರು. ಪರೀಕ್ಷಾ ವರದಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಬಳಿಕ ಸೋಮವಾರ ಮೌಲಾನಾ ಕ್ರೈಂ ಬ್ರಾಂಚ್‌ ಮುಂದೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪೊಲೀಸರ ನಿರ್ದೇಶನದ ಮೇರೆ ಕ್ವಾರಂಟೈನ್​ನಲ್ಲಿ ಇದ್ದ ಸಾದ್​, ಸರ್ಕಾರದ ಆದೇಶದಂತೆ ನಾನೂ ಕ್ವಾರಂಟೈನ್ ನಲ್ಲಿದ್ದು, ನೀವೂ ಕೂಡ ಸರ್ಕಾರದ ಆದೇಶ ಪಾಲಿಸಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net