

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಮುಂಬೈಗೆ ಮತದಾನ ಹಕ್ಕನ್ನು ಸ್ಥಳಾಂತರಿಸಿಕೊಳ್ಳಿ ಎಂದವನಿಗೆ ನಟಿ ತಾಪ್ಸಿ ಪನ್ನು ಟ್ವೀಟ್ ಮೂಲಕ ತಿರುಗೇಟು ನೀಡಿದ ಪ್ರಸಂಗ ದೆಹಲಿ ಚುನಾವಣೆ ಮತದಾನದ ನಡುವೆಯೇ ನಡೆದಿದೆ.
ಇಂದು ನಡೆಯುತ್ತಿರುವ ದೆಹಲಿ ವಿಧಾನಸಭಾ ಚುನಾವಣೆಯ ಮತದಾನದಲ್ಲಿ ನಟಿ ತಾಪ್ಸಿ ಪನ್ನು ಕುಟುಂಬ ಸಮೇತರಾಗಿ ಮತ ಚಲಾಯಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು, ಪನ್ನು ಪರಿವಾರ ಮತ ಚಲಾಯಿಸಿದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ರೀಟ್ವೀಟ್ ಮಾಡಿರುವ ನೆಟ್ಟಿಗನೊಬ್ಬ ಮುಂಬೈನಲ್ಲಿ ವಾಸಿಸುವ ಮಂದಿ ನಮಗಾಗಿ ನಿರ್ಧಾರ ಮಾಡುತ್ತಾರೆ. ಬಹಳ ದಿನಗಳ ಹಿಂದೆಯೇ ತಾಪ್ಸಿ ಪನ್ನು ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಅವರು ತಮ್ಮ ಮತವನ್ನು ಕೂಡ ಮುಂಬೈಗೆ ಸ್ಥಳಾಂತರ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ತಾಪ್ಸಿ, ಮುಂಬೈಗಿಂತ ಹೆಚ್ಚು ಉಳಿದುಕೊಂಡಿಲ್ಲದಿದ್ದರೂ, ಸದ್ಯ ನಾನು ದೆಹಲಿಯಲ್ಲೇ ವಾಸಿಸುತ್ತಿದ್ದೇನೆ. ನನ್ನ ಆದಾಯಕ್ಕೆ ದೆಹಲಿ ಮೂಲಕವೇ ತರಿಗೆ ವಿಧಿಸಲಾಗುತ್ತಿದೆ. ಹೆಚ್ಚಾಗಿ ದೆಹಲಿಯಲ್ಲಿ ವಾಸಿಸುವ ಮಂದಿ ಮತದಾನದಲ್ಲಿ ಬಹುಶಃ ನೆರವಾಗುವುದಿಲ್ಲ. ಆದರೆ ನಾನು ಅವರಿಗಿಂತ ಉತ್ತಮಳಾಗಿದ್ದೇನೆ. ದಯವಿಟ್ಟು ನನ್ನ ಪೌರತ್ವ ಬಗ್ಗೆ ಪ್ರಶ್ನಿಸಬೇಡಿ. ನಿಮ್ಮ ಹಾಗೂ ನಿಮ್ಮ ಕರ್ತವ್ಯದ ಮೇಲೆ ಗಮನ ಹರಿಸಿ ಎಂದಿದ್ದಾರೆ.
ಮುಂದುವರಿದು ನೀವು ಒಂದು ಹುಡುಗಿಯನ್ನು ದೆಹಲಿಯಿಂದ ಹೊರಗೆ ತೆಗೆದುಕೊಂಡು ಹೋಗಬಹುದು. ಆದರೆ, ಈ ಹುಡುಗಿಯಿಂದ ದೆಹಲಿಯನ್ನು ಹೊರಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನಾನು ಏನು ಮಾಡಬೇಕು? ಮಾಡಬಾರದು? ಎಂಬುದನ್ನು ಹೇಳಲು ನಿಮಗೆ ಯಾವುದೇ ಹಕ್ಕು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಜನಿಸಿದ ತಾಪ್ಸಿ ಅಲ್ಲಿಯೇ ಇಂಜಿನಿಯರಿಂಗ್ ಮುಗಿಸಿದರು. ಬಳಿಕ ಚಿತ್ರರಂಗದ ಕಡೆ ಗಮನ ಹರಿಸಿದ ಆಕೆ ದಕ್ಷಿಣ ಕಡೆ ಮುಖ ಮಾಡಿದರು. 2012ರಲ್ಲಿ ಛಸ್ಮೆ ಬದ್ದೂರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ತಮಿಳು, ತೆಲುಗ ಹಾಗೂ ಹಿಂದಿ ಸೇರಿ ಅನೇಕ ಚಿತ್ರಗಳಲ್ಲಿ ತಾಪ್ಸಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)