ಬೆಂಕಿ ಬಿದ್ದು ಉದ್ಯಾನ ಭಸ್ಮ

IMG_20200518_082134
Published on

ತಿ.ನರಸೀಪುರ: ವಿದ್ಯುತ್ ಕಂಬದಿಂದ ಬಿದ್ದ ಬೆಂಕಿ ಕಿಡಿಯಿಂದ ಸೋಮವಾರ ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಸಮೀಪದ ಬಳ್ಳೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಉದ್ಯಾನ ಸುಟ್ಟು ಭಸ್ಮವಾಗಿದೆ.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪರಿಶ್ರಮದಿಂದ ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾದ ಸಂದರ್ಭದಲ್ಲಿ ಪಾರ್ಕ್ ನೂತನವಾಗಿ ನಿರ್ಮಾಣಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಪಾರ್ಕ ನಿರ್ಮಿಸಲಾಗಿದ್ದು ನಿರ್ವಹಣೆಯಿಲ್ಲದೇ ಸೊರಗಿತ್ತು. ಅಲ್ಲದೇ ಪಾರ್ಕ್‌ಗೆ ನೀರು ಸಿಂಪಡಿಸಲು ಅಳವಡಿಸಿದ್ದ ಸ್ಪ್ಲಿಂ ಕರ್ ಗಳು ಬಿಡಾಡಿ ದನಗಳು ತುಳಿದು ಕೆಟ್ಟುನಿಂತಿವೆ. ಇದರಿಂದ ಪಾರ್ಕ್ ನೀರಿಲ್ಲದೇ ಒಣಗಿ ನಿಂತಿತ್ತು.
ಪಾರ್ಕ್‌ಗೆ ಹೊಂದಿ ಕೊಂಡಂತೆ ರಸ್ತೆ ಬದಿಯಲ್ಲಿ ಗೊಬ್ಬಳಿ ಮರವಿದ್ದು, ಮರದ ಪಕ್ಕದಲ್ಲೇ ವಿದ್ಯುತ್ ಕಂಬ ಹಾದು ಹೋಗಿದೆ. ಈ ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಬೆಂಕಿ ಕಿಡಿ ಮರಕ್ಕೆ ತಗುಲಿ ಇಡೀ ಪಾರ್ಕ್‌ಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಪರಿಣಾಮ ಲಕ್ಷಾಂತರ ರೂ . ಬೆಲೆಬಾಳುವ ಮರ ಗಿಡಗಳು, ಅಲಂಕಾರಿಕ ಸಸ್ಯಗಳು ಸುಟ್ಟು ಭಸ್ಮವಾಗಿವೆ. ಶ್ರೀಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಸಿಬ್ಬಂದಿ ವೇದಾವತಿ ಎಂಬುವರು ಅಗ್ನಿ ಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಜನಪ್ರತಿನಿಧಿಗಳ ಭೇಟಿ: ಸ್ಥಳಕ್ಕೆ ಪುರಸಭಾ ಸದಸ್ಯ ಕಿರಣ್ ಹಾಗೂ ಬಾದಾಮಿ ಮಂಜು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು. ವಿದ್ಯುತ್ ಕಂಬ ಸ್ಥಳಾಂತರಿಸಿ, ಮರವನ್ನು ಕಡಿಯಲು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗುವುದು ಹಾಗೂ ಪಾರ್ಕ್ ಒಳಗೆ ಬೀಡಾಡಿ ದನಗಳನ್ನು ಬಿಡುವವರ ವಿರುದ್ಧ ದೂರು ನೀಡಲಾಗುವುದು. ದನಗಳನ್ನು ಪಿಂಜರಾಪೋಲ್‌ಗೆ ಕಳುಹಿಸಲಾ ಗುವುದೆಂದು ಎಚ್ಚರಿಸಿದರು.
ಪೋಟೋ ಕ್ಯಾಪ್ಷನ್: ತಿ.ನರಸೀಪುರದ ನದೀ ತೀರದ ಶ್ರೀಬಳ್ಳೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಉದ್ಯಾನವನಕ್ಕೆ ಬೆಂಕಿ ಬಿದ್ದು ಭಸ್ಮವಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net