ರಷ್ಯಾದಲ್ಲಿ ಅಸ್ಸಾದ್​! ​ಭವ್ಯ​​ ಅರಮನೆಯ ರೋಲ್ಸ್ ರಾಯ್ಸ್, ಫೆರಾರಿ ಕಾರುಗಳು ಬಂಡುಕೋರರ ಪಾಲು | Syrian Rebels

ವಿಜಯವಾಣಿ - 2024-12-09T173226.382
Published on

Syrian Rebels: ಸಿರಿಯಾದ ಬಂಡುಕೋರರ ಪಡೆಗಳು (Syrian Rebels) ಸರ್ಕಾರದ ವಿರುದ್ಧ ದೊಡ್ಡ ಸಮರವೇ ಸಾರಿದ್ದು, ಅಧ್ಯಕ್ಷ ಬಶರ್ ಅಲ್-ಅಸ್ಸಾದ್ 24 ವರ್ಷಗಳ ಆಡಳಿತಕ್ಕೆ ಯುಗಾಂತ್ಯವಾಡಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್​ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡ ಬಂಡುಕೋರರು, ಬಶರ್​ ಅಧಿಕಾರದಲ್ಲಿ ಏನೇನಿತ್ತೋ ಅದನ್ನೆಲ್ಲಾ ಇದೀಗ ತಮ್ಮ ಆಡಳಿತಕ್ಕೆ ತರುವಲ್ಲಿ ಮುಂದಾಗಿದ್ದಾರೆ. ತನ್ನ ಆಟ ಇಲ್ಲಿಗೆ ಮುಕ್ತಾಯ ಎಂಬುದನ್ನು ಅರಿತ ಬೆನ್ನಲ್ಲೇ ದೇಶದಿಂದ ಪಲಾಯನ ಮಾಡಿದ್ದ ಅಸ್ಸಾದ್​, ಆರಂಭದಲ್ಲಿ ಎಲ್ಲಿಗೆ ಹೋದರು ಎಂಬ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆದರೆ, ರಷ್ಯಾದಲ್ಲಿ ಬಶರ್​​ ಮತ್ತು ಆತನ ಕುಟುಂಬಕ್ಕೆ ನೆಲೆ ಸಿಕ್ಕಿರುವುದು ಈಗ ಸ್ಪಷ್ಟವಾಗಿದೆ.

ಲಕ್ಸುರಿ ಕಾರುಗಳು

ವಿಮಾನದಲ್ಲಿ ಸಿರಿಯಾದಿಂದ ಪಲಾಯನ ಮಾಡಿದ ಬಶರ್​, ಎಲ್ಲಿಗೆ ತೆರಳಿದ್ದಾರೆ? ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭಿಸಿರಲಿಲ್ಲ. ಆದರೆ, ರಷ್ಯಾ ಸಹಾಯ ಪಡೆದಿರುವ ಮಾಜಿ ಅಧ್ಯಕ್ಷ, ಸದ್ಯ ರಷ್ಯಾದಲ್ಲಿ ತಮ್ಮ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದಾರೆ. ಬಂಡುಕೋರರ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಅಸ್ಸಾದ್​ ವಾಸವಿದ್ದ ಭವ್ಯ ಬಂಗಲೆಯಲ್ಲಿ ಐಷಾರಾಮಿ ಕಾರುಗಳಿರುವ ವಿಡಿಯೋವೊಂದು ಸದ್ಯ ವ್ಯಾಪಕವಾಗಿ ಹರಿದಾಡಿದೆ. ಮಾಜಿ ಅಧ್ಯಕ್ಷನ ಬಳಿ ಫೆರಾರಿ, ಆಸ್ಟನ್ ಮಾರ್ಟಿನ್ಸ್, ರೋಲ್ಸ್ ರಾಯ್ಸ್ ಮತ್ತು ಬಿಎಂಡಬ್ಲ್ಯೂನಂತಹ ದುಬಾರಿ ಮೌಲ್ಯದ ಕಾರುಗಳ ಸಂಗ್ರಹವಿರುವುದನ್ನು ಬಂಡುಕೋರರು ದೃಶ್ಯದಲ್ಲಿ ತೋರಿಸಿದ್ದಾರೆ.

ಹೊಸ ಯುಗದ ಆರಂಭ

ಇನ್ನು ನಿರಂಕುಶಾಧಿಕಾರಿ ಬಶರ್ ಅಲ್-ಅಸ್ಸಾದ್ ದೇಶದಿಂದಲೇ ಪಲಾಯನ ಮಾಡಿದ್ದಾನೆ. ನಾವು ರಾಜಧಾನಿ ಡಮಾಸ್ಕಸ್ ಅನ್ನು ನಿರಂಕುಶಾಧಿಕಾರಿ ಅಸ್ಸಾದ್​ನಿಂದ ಮುಕ್ತಗೊಳಿಸಿದ್ದೇವೆ ಎಂದು ಬಂಡುಕೋರರು ಘೋಷಿಸಿದ್ದಾರೆಂದು ಅಲ್ ಜಜೀರಾ ತನ್ನ ವರದಿಯಲ್ಲಿ ತಿಳಿಸಿದೆ. 8-12–2024ರ ಈ ಕರಾಳ ಯುಗದ ಅಂತ್ಯ ಮತ್ತು ಸಿರಿಯಾದ ಹೊಸ ಯುಗದ ಆರಂಭವನ್ನು ಘೋಷಿಸುತ್ತೇವೆ ಎಂದು ಹಯಾತ್ ತಹ್ರೀರ್ ಅಲ್-ಶಾಮ್ ಬಂಡಾಯ ಬಣವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಯಾವುದೇ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net