

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಎತ್ತ ನೋಡಿದರೂ ಹಸಿರು, ತೆಂಗು, ಅಡಕೆ ಮರಗಳ ಸಾಲುಗಳು. ಕಣ್ವ ನದಿ ತಟದಲ್ಲಿ ಸದ್ದಿಲ್ಲದೆ ಕೃಷಿ ಪ್ರಧಾನ ಗ್ರಾಮವಾಗಿ ಗುರುತಿಸಿಕೊಳ್ಳುತ್ತಿರುವ ಶ್ಯಾನುಭೋಗನಹಳ್ಳಿ.
ಹೌದು..! ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಜಿಲ್ಲಾ ಕೇಂದ್ರದಿಂದ 6 ಕಿಮೀ ಅಂತರದಲ್ಲಿರುವ ಈ ಗ್ರಾಮ, ಮಾಗಡಿ, ಕುಣಿಗಲ್ ಮತ್ತಿತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ. ಉತ್ತಮ ಸಾರಿಗೆ ಸಂಪರ್ಕ ಗ್ರಾಮಕ್ಕಿದ್ದು, ಜಿಲ್ಲೆಯಲ್ಲಿ ವಿಶಿಷ್ಟ ಹೆಗ್ಗುರು ಮೂಡಿಸಿದೆ.
ಕಣ್ವ ಜಲಾಶಯದ ಹಿನ್ನೀರಿನ ದಂಡೆಯಲ್ಲಿ ಬಾನೆತ್ತರದ ತೆಂಗು, ಅಡಕೆ ಮರಗಳ ಸಿರಿಯಲ್ಲಿ ಸದಾ ಹಸಿರನ್ನೇ ಹಾಸು ಹೊದ್ದಿರುವ ಶ್ಯಾನುಭೋಗನಹಳ್ಳಿ ಕೃಷಿ ಪ್ರಧಾನ ಗ್ರಾಮವಾಗಿದ್ದು, ಹೆಚ್ಚಿನ ರೈತರು ರೇಷ್ಮೆ ಅವಲಂಬಿಸಿದರೆ ಕೆಲವರು ತೆಂಗು, ಅಡಕೆ, ಮಾವು ಸೇರಿ ತೋಟಗಾರಿಕಾ ಬೆಳೆ ಬೆಳೆಯುತ್ತಾರೆ. ಕೃಷಿ ಕಾಯಕದ ತೆಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. ಬದಲಾದ ದಿನಗಳಲ್ಲಿ ವ್ಯಾಪಾರ-ವಹಿವಾಟು ದ್ವಿಗುಣಗೊಂಡು ಚಿಕ್ಕ ವಾಣಿಜ್ಯ ಪಟ್ಟಣವಾಗಿ ಗ್ರಾಮ ಬೆಳೆಯುತ್ತಿದ್ದು, ಎಲ್ಲ ವರ್ಗದ ಜನರು ಸೌಹಾರ್ದದ ಬದುಕು ಕಟ್ಟಿಕೊಂಡಿದ್ದಾರೆ.
ಜನ ಹುಡುಕಿಕೊಂಡು ಬಂದಿದ್ದು ಶ್ಯಾನುಭೋಗರಹಳ್ಳಿ!
ಈ ಹಿಂದಿನ ರಾಜ-ಮಹಾರಾಜರ ಕಾಲದಲ್ಲಿ ಭೂಮಿ ಕ್ರಯ, ಕಾಗದ, ಕಂದಾಯ ಪತ್ರಗಳ ನಿರ್ವಹಣೆಯನ್ನು ಶ್ಯಾನುಭೋಗರೇ ನೋಡಿಕೊಳ್ಳುತ್ತಿದ್ದು, ಅವರಲ್ಲಿ ಬಹುತೇಕರು ಈ ಗ್ರಾಮದಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಭೂಮಿ ಮತ್ತಿತರ ವ್ಯವಹಾರಗಳಿಗೆ ಶ್ಯಾನುಭೋಗರನ್ನು ಹುಡುಕಿಕೊಂಡು ಬರುತ್ತಿದ್ದ ಜನ ಶ್ಯಾನುಭೋಗರಹಳ್ಳಿ ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಶ್ಯಾನುಭೋಗನಹಳ್ಳಿಯಾಗಿ ಜನಾನುರಾಗಿಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.
ಈಗಿನ ಶ್ಯಾನುಭೋಗನಹಳ್ಳಿಯು ಈ ಮೊದಲು ಕಣ್ವ ನದಿ ಪಕ್ಕದ ಕಣ್ವ ಕೆರೆ ಹಿನ್ನೀರಿನ ಪ್ರದೇಶದಲ್ಲಿತ್ತು. ಕೆರೆ ತುಂಬಿದಾಗ ನೀರು ಮನೆಗಳಿಗೆ ನುಗ್ಗುತ್ತಿದ್ದ ಕಾರಣ, ಜನ ಸ್ಥಳ ತೊರೆದು ಎತ್ತರದ ಪ್ರದೇಶ(ಈಗಿನ ಸ್ಥಳ)ಕ್ಕೆ ಬಂದು, ಹೊಸ ಗ್ರಾಮ ಕಟ್ಟಿಕೊಂಡರು ಎನ್ನಲಾಗುತ್ತಿದೆ.
ಗ್ರಾಮದ ವೀರಯೋಧ ತಿರುಮಲ್ಲೇಶ್ ಜಮ್ಮು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುವಾಗಿ ಬನ್ನಿಹಾಳ್ ಎಂಬಲ್ಲಿ 2002ರ ನ.17ರಂದು ಉಗ್ರರ ಗುಂಡಿಗೆ ಹುತಾತ್ಮರಾದರು. ಅವರ ಗೌರವಾರ್ಥ ಗ್ರಾಮದ ವೃತ್ತದಲ್ಲಿ ಗ್ರಾಮಸ್ಥರು ಪುತ್ಥಳಿ ನಿರ್ಮಿಸಿದ್ದಾರೆ. ಇದೇ ವೃತ್ತ ಸುತ್ತಲ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ. ಮಣ್ಣಿನ ಗೋಡೆ, ನಾಡಹೆಂಚಿನ ಮನೆಗಳೇ ಕಾಣುತ್ತಿದ್ದ ಶ್ಯಾನುಭೋಗನಹಳ್ಳಿಯಲ್ಲೀಗ ಎಲ್ಲೆಲ್ಲೂ ಕಾಂಕ್ರೀಟ್ ಮನೆಗಳು ತಲೆಯೆತ್ತುತ್ತಿವೆ. ಮುಂದೊಂದು ದಿನ ಶ್ಯಾನುಭೋಗನಹಳ್ಳಿಯು ಹೋಬಳಿ ಕೇಂದ್ರವಾಗಿಯೂ ಮೇಲ್ದರ್ಜೆಗೇರಬಹುದು.
ಶ್ಯಾನುಭೋಗನಹಳ್ಳಿ ಹಾಗೂ ರಂಗಭೂಮಿಗೆ ನಂಟಿದ್ದು, ದಿ.ಕಾಂತರಾಜ್ ಪಟೇಲ್ ನೂರಾರು ನಾಟಕಗಳಲ್ಲಿ ಅಭಿನಯಿಸಿ, ರಂಗಭೂಮಿ ಕಲೆಯಲ್ಲಿ ಗ್ರಾಮದ ಹೆಸರನ್ನು ಜಿಲ್ಲೆ, ಹೊರ ಜಿಲ್ಲೆಗಳಿಗೂ ಪರಿಚಯಿಸಿದ್ದಾರೆ. ಗ್ರಾಮದ ಈಗಿನ ಹಿರಿಯ, ಕಿರಿಯ ಕಲಾವಿದರು ಸಹ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಂಗಕಲೆಗೆ ಕೊಡುಗೆ ನೀಡುತ್ತಿದ್ದಾರೆ.