ಭಾರತೀಯ ಮೂಲದ ಹಿಂದೂಜಾ ಕುಟುಂಬಕ್ಕೆ ನಾಲ್ಕೂವರೆ ವರ್ಷ ಶಿಕ್ಷೆ ವಿಧಿಸಿದ ಸ್ವಿಸ್ ಕೋರ್ಟ್​​​; ಏನಿದು ಪ್ರಕರಣ.. ಇಲ್ಲಿದೆ ಡೀಟೇಲ್ಸ್​​

Untitled-design-2024-06-23T160428.655
Published on

ನವದೆಹಲಿ​​: ಬ್ರಿಟನ್‌ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಭಾರತೀಯ ಮೂಲದ ಹಿಂದೂಜಾ ಕುಟುಂಬವು ಒಂದು ಎಂದು ಪರಿಗಣಿಸಲಾಗುತ್ತದೆ. ಈ ಕುಟುಂಬದ ನಾಲ್ವರು ಪ್ರಕಾಶ್ ಹಿಂದುಜಾ, ಅವರ ಪತ್ನಿ ಕಮಲ್ ಹಿಂದುಜಾ, ಪುತ್ರ ಅಜಯ್ ಹಿಂದುಜಾ ಮತ್ತು ಸೊಸೆ ನಮ್ರತಾ ಹಿಂದುಜಾ ಅವರ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಮನೆಯಲ್ಲಿ ಕೆಲಸ ಮಾಡುವವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಯಿತು.

ಮಾನವ ಕಳ್ಳಸಾಗಣೆ ಆರೋಪವನ್ನು ನಿಜವೆಂದು ಪರಿಗಣಿಸದ ಸ್ವಿಸ್ ನ್ಯಾಯಾಲಯವು ತನ್ನ ಉದ್ಯೋಗಿಗಳಿಗೆ ಕಡಿಮೆ ವೇತನ ಮತ್ತು ಹೆಚ್ಚಿನ ಕೆಲಸ ಮಾಡಿಸಿರುವ ಆರೋಪದ ಮೇಲೆ ಹಿಂದೂಜಾ ಕುಟುಂಬಕ್ಕೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿತು. ಭಾರತದಲ್ಲಿ ಜನಿಸಿದ ಪ್ರಕಾಶ್ ಹಿಂದುಜಾ ಅವರು ಹಿಂದೂಜಾ ಗ್ರೂಪ್ ಯುರೋಪ್‌ನ ಅಧ್ಯಕ್ಷರಾಗಿದ್ದಾರೆ. ಜಿನೀವಾದಲ್ಲಿರುವ ತನ್ನ ಭವನವೊಂದರಲ್ಲಿ ಕೆಲಸ ಮಾಡಲು ಭಾರತದಿಂದ ಕೆಲವರನ್ನು ಕರೆತಂದಿದ್ದ ಹಿಂದೂಜಾ ಕುಟುಂಬವು ಈ ಜನರ ಪಾಸ್‌ಪೋರ್ಟ್‌ಗಳನ್ನು ಇಟ್ಟುಕೊಂಡಿದ್ದು ಮುಕ್ತವಾಗಿ ಓಡಾಡಲು ಅವಕಾಶ ನೀಡದೆ ನಿರ್ಬಂಧ ವಿಧಿಸಿದೆ ಎಂದು ಸ್ವಿಸ್​​ ಆಡಳಿತ ಆರೋಪಿಸಿದೆ.

ಈ ಪ್ರಕರಣದಲ್ಲಿ ಸ್ವಿಸ್ ಆಡಳಿತದ ಪರವಾಗಿ ಹಾಜರಾದ ಸರ್ಕಾರಿ ವಕೀಲ ವೈವ್ಸ್ ಬರ್ಟೋಸಾ ಅವರು, ಹಿಂದುಜಾ ಕುಟುಂಬ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಿಂತ ತಮ್ಮ ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ. ನಾಯಿಯೊಂದರ ನಿರ್ವಹಣೆ ಮತ್ತು ಆಹಾರಕ್ಕಾಗಿ ವಾರ್ಷಿಕವಾಗಿ 10 ಸಾವಿರ ಯುಎಸ್ ಡಾಲರ್ (ರೂ. 8.5 ಲಕ್ಷ) ಖರ್ಚು ಮಾಡುತ್ತಿದ್ದರೆ, ಒಬ್ಬ ಮನೆಗೆಲಸದ ಸಿಬ್ಬಂದಿಗೆ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಿಸಿ ಕೇವಲ 7.84 ಡಾಲರ್‌ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೂಜಾ ಕುಟುಂಬದ ವಕೀಲರು ಕಡಿಮೆ ಸಂಬಳದ ಆರೋಪವನ್ನು ಅಲ್ಲಗಳೆಯದೆ, ನಿಗದಿತ ಸಂಬಳದಲ್ಲಿ ವಸತಿ ಮತ್ತು ಆಹಾರವೂ ಸೇರಿದೆ ಎಂದು ಹೇಳಿದರು. ಅಲ್ಲದೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಆರೋಪದ ಬಗ್ಗೆ ಮಕ್ಕಳೊಂದಿಗೆ ಚಲನಚಿತ್ರಗಳನ್ನು ನೋಡುವುದನ್ನು ಕೆಲಸ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು.

ಇನ್ನು, ಸಂತ್ರಸ್ತರೆಂದು ಬಣ್ಣಿಸಲಾಗುತ್ತಿರುವ ಜನರು ಹಿಂದೂಜಾ ಕುಟುಂಬಕ್ಕಾಗಿ ಹಲವಾರು ಸಂದರ್ಭಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಕೆಲಸದ ವಾತಾವರಣದಲ್ಲಿ ತೃಪ್ತರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹಿಂದೂಜಾ ಕುಟುಂಬದ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.

ಆದರೆ, ಮನೆ ಕೆಲಸ ಮಾಡುವ ಸಿಬ್ಬಂದಿಯ ಪಾಸ್‌ಪೋರ್ಟ್‌ಗಳನ್ನು ಹಿಂದೂಜಾ ಕುಟುಂಬ ತಮ್ಮ ಬಳಿಯೇ ಇರಿಸಲಾಗಿದೆ ಎಂಬ ಆರೋಪವನ್ನು ನ್ಯಾಯಾಲಯವು ನಿಜವೆಂದು ಪರಿಗಣಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳು ಎಲ್ಲಿಯೂ ಮುಕ್ತವಾಗಿ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನು ಸ್ವಿಸ್ ಕಾನೂನಿನಲ್ಲಿ ಮಾನವ ಕಳ್ಳಸಾಗಣೆ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಹಿಂದೂಜಾ ಕುಟುಂಬಕ್ಕೆ ಇದು ಕಷ್ಟಕರವಾಗಿತ್ತು. ಈ ಕಾರಣಕ್ಕಾಗಿ ಹಿಂದೂಜಾ ಕುಟುಂಬಕ್ಕೆ ಕೋರ್ಟ್​​​ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net