ಚುಂಚಶ್ರೀ ಮಹಿಳಾ ಒಕ್ಕಲಿಗರ ಸಂಘ ಉದ್ಘಾಟನೆ

30.. Pyp.07
Published on

ಪಿರಿಯಾಪಟ್ಟಣ : ವನಿತೆಯರು ಸಂತಸದಿಂದ ಇರುವ ಮನೆಯಲ್ಲಿ ಸುಖ, ಸಂಪತ್ತು, ನೆಮ್ಮದಿ ನೆಲೆಸಿರುತ್ತದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಚುಂಚಶ್ರೀ ಮಹಿಳಾ ಒಕ್ಕಲಿಗರ ತಾಲೂಕು ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣನ್ನು ಶಕ್ತಿ ದೇವತೆಯ ಸ್ವರೂಪವಾಗಿ ಗೌರವಿಸುವ ಸಂಪ್ರದಾಯವನ್ನು ಹೊಂದಿರುವ ನಾವು ಸಮಾಜ ಸೇವೆ ಮಾಡುವ ಸ್ವಾತಂತ್ರ್ಯವನ್ನು ನೀಡಬೇಕು ಎಂದರು. ಮನೆಯ ಗೌರವವನ್ನು ಕಾಪಾಡಿಕೊಳ್ಳುವ ಹೆಣ್ಣು ಕುಟುಂಬದವರನ್ನು ನಿಭಾಯಿಸುವ ಕಲೆಯನ್ನೂ ಹೊಂದಿರುತ್ತಾಳೆ. ಇಂಥವರು ಸಂಘ ರಚಿಸಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದ ಮಹಿಳೆಯರು ಸಮಾಜಸೇವೆ ಉದ್ದೇಶದೊಂದಿಗೆ ಸಂಘ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ ಎಂದರು. ಸಂಘದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಬಯಸಿದಲ್ಲಿ ನಿವೇಶನ ದೊರಕಿಸಿಕೊಡಲು ಯತ್ನಿಸುವೆ. ಧನಸಹಾಯವನ್ನೂ ಮಾಡುವೆ ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷೆ ಉಷಾ, ಪ್ರಗತಿಪರ ರೈತ ಮಹಿಳೆ ಪದ್ಮಮ್ಮ, ಮುಖಂಡರಾದ ಬಿ.ಎನ್.ಕರೀಗೌಡ, ಗಂಗಾಧರ್, ಛಾಯಾಗೌಡ, ಸರೋಜಮ್ಮ ಮಾತನಾಡಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಸುಮಿತ್ರಾ, ಅನಿತಾ, ಲೀಲಾವತಿ, ಸುಷ್ಮಾ, ನಮಿತಾ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net