ಪಟಾಕಿ ನಿಷೇಧ; ಸ್ವದೇಶಿ ಜಾಗರಣ್ ಮಂಚ್​ ವಿರೋಧ

Untitled-1
Published on

ನವದೆಹಲಿ: ಈ ಸಲ ದೀಪಾವಳಿ ಸಂದರ್ಭದಲ್ಲಿ ಕರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆ ಮಾಡಬೇಕೇ ಬೇಡವೇ ಎಂಬುದು ಭಾರಿ ಚರ್ಚೆಯಲ್ಲಿರುವ ನಡುವೆಯೇ ಕೆಲವು ರಾಜ್ಯಗಳು ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿವೆ.

ಆದರೆ ಇದಕ್ಕೀಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್​ ವಿರೋಧ ವ್ಯಕ್ತಪಡಿಸಿದೆ. ಈ ದೀಪಾವಳಿ ಸಂದರ್ಭದಲ್ಲಿ ಪಟಾಕಿಗೆ ನಿಷೇಧ ಹೇರಿರುವ ರಾಜ್ಯಗಳ ಕ್ರಮ ಅಸಮಂಜಸ. ಸರ್ಕಾರ ಸರಿಯಾದ ಮಾಹಿತಿ ಇಲ್ಲದೆ ದೀಪಾವಳಿ ಸಂದರ್ಭದಲ್ಲಿ ಎಲ್ಲ ರೀತಿಯ ಪಟಾಕಿಗಳ ಮೇಲೆ ನಿಷೇಧ ಹೇರಿದೆ, ಇದು ಸರಿಯಲ್ಲ ಎಂದು ಮಂಚ್​ ಅಭಿಪ್ರಾಯ ಪಟ್ಟಿದೆ.

ಇದುವರೆಗೆ ಚೀನಾದಿಂದ ಪಟಾಕಿಗಳನ್ನು ಕಾನೂನುಬಾಹಿರವಾಗಿ ಆಮದು ಮಾಡಿಕೊಳ್ಳುತ್ತಿದ್ದುದರಿಂದ ಆ ಪಟಾಕಿಗಳಿಂದ ಹೆಚ್ಚಿನ ಮಾಲಿನ್ಯ ಆಗುತ್ತಿತ್ತು. ಆದರೆ ಈಗ ಮಾಲಿನ್ಯರಹಿತ ಹಸಿರು ಪಟಾಕಿಗಳು ಭಾರತದಲ್ಲೇ ತಯಾರಾಗುತ್ತಿವೆ. ಅದರಲ್ಲಿ ಪೊಟ್ಯಾಷಿಯಂ ನೈಟ್ರೇಟ್​ ಮತ್ತು ಸಲ್ಫರ್ ಇರುವುದಿಲ್ಲ ಹಾಗೂ ಮಾಲಿನ್ಯಕಾರಕಗಳಾದ ಅಲ್ಯುಮಿನಿಯಂ, ಲಿಥಿಯಂ, ಆರ್ಸೆನಿಕ್​ ಮತ್ತು ಮರ್ಕ್ಯೂರಿಗಳು ಕನಿಷ್ಠ ಪ್ರಮಾಣದಲ್ಲಿ ಇರುತ್ತವೆ. ಇವು ಕೌನ್ಸಿಲ್​ ಆಫ್ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್ ರಿಸರ್ಚ್​ನಿಂದ ಪ್ರಮಾಣೀಕೃತವಾಗಿದ್ದು, ಶೇ. 30 ಕಡಿಮೆ ಮಾಲಿನ್ಯ ಉಂಟು ಮಾಡುವಂಥವಾಗಿವೆ. ಅಲ್ಲದೆ ಈಗ ಎಲ್ಲ ಥರದ ಚೀನಾ ವಸ್ತುಗಳ ಆಮದು ಬ್ಯಾನ್​ ಆಗಿದೆ. ಹೀಗಿರುವಾಗ ದೀಪಾವಳಿ ಸಂದರ್ಭದಲ್ಲಿ ಪಟಾಕಿಯನ್ನು ನಿಷೇಧಿಸಿದ್ದು ಸರಿಯಲ್ಲ ಎಂದು ಎಸ್​ಜೆಮ್​ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದಾರೆ.

ಅಷ್ಟಕ್ಕೂ ಭಾರತದ ಪಶ್ಚಿಮ ಬಂಗಾಲ, ತಮಿಳುನಾಡಿನಲ್ಲಿನ ಶಿವಕಾಶಿ ಮುಂತಾದೆಡೆಯ ಲಕ್ಷಾಂತರ ಮಂದಿ ಪಟಾಕಿಯನ್ನೇ ಜೀವನೋಪಾಯ ಆಗಿಸಿಕೊಂಡಿದ್ದಾರೆ. ಅಲ್ಲದೆ ದೀಪಾವಳಿ ಸಂದರ್ಭದಲ್ಲಿ ಎರಡು ಗಂಟೆ ಪಟಾಕಿ ಹೊಡೆಯಲು ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶವೇ ಹೇಳಿದೆ ಎಂದು ಮಂಚ್​ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net