

ಕಲ್ಕತ್ತ: ಚುನಾವಣೆ ಹಿನ್ನೆಲೆಯಲ್ಲಿ ಅಕ್ಷರಶಃ ರಣರಂಗವಾಗಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಇದೇ 27 ರಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಈ ಸಾರಿ ಬಂಗಾಳದಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಲೆನೋವಾಗಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
ಆದರೆ, ಮಮತಾ ವಿರುದ್ಧ ಕಣಕ್ಕೀಳಿಯುವ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಇದೀಗ ಅದಕ್ಕೆ ಬಹುತೇಕ ಉತ್ತರ ದೊರಕಿದ್ದು, ಟಿಎಂಸಿಯಿಂದ ಹೊರ ಹೋಗಿ ಬಿಜೆಪಿ ಸೇರಿರುವ ಬಂಗಾಳದ ಪ್ರಭಾವಿ ರಾಜಕಾರಣಿ, ಮಮತಾ ಅವರ ಮಾಜಿ ಆಪ್ತ ಸುವೆಂದು ಅಧಿಕಾರಿಯನ್ನೇ ಮಮತಾ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ಎಲ್ಲ ಸಿದ್ದತೆ ಮಾಡಿಕೊಂಡಿದೆ.
ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶನಿವಾರ ಸಂಜೆ ಬಿಡುಗಡೆಯಾಗಲಿದ್ದು, ಸುವೆಂದು ಅಧಿಕಾರಿ ಅವರು ಮಮತಾ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಂದಿಗ್ರಾಮದ ಶಾಸಕರಾಗಿದ್ದ ಅಧಿಕಾರಿ, ಮಮತಾ ಅವರ ಮೇಲೆ ಮುನಿಸಿಕೊಂಡು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಟಿಎಂಸಿಯ ಭದ್ರಕೋಟೆ ಎನಿಸಿಕೊಂಡಿದೆ.