

ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಬುಧವಾರ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೇಖಾ(23) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು ೩ ಗಂಟೆಯ ಸಮಯದಲ್ಲಿ ಸೀರೆಯಿಂದ ಪ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಮುಂದಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪತಿ ಸಂತೋಷ್(27) ಮತ್ತು ಆಕೆಯ ಕುಟುಂಬದವರು ತಿಳಿಸಿದ್ದಾರೆ. ಆದರೆ ತಮ್ಮ ಪುತ್ರಿಗೆ ದೈಹಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ರೇಖಾ ತಾಯಿ ಅಭಿರಾಮಿ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಲಹಂಕ ನ್ಯೂಟೌನ್‌ನಲ್ಲಿ ವಾಸವಾಗಿದ್ದ ಮನೆಯಲ್ಲಿ ರೇಖಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿ ಸಂತೋಷ್ ಕೊಲೆ ಮಾಡಿರುವುದಾಗಿ ರೇಖಾ ತಾಯಿ ದೂರು ನೀಡಿದ್ದು ಈ ಸಂಬಂಧ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತಮಿಳುನಾಡು ಮೂಲದ ಸಂತೋಷ್-ರೇಖಾ ದಂಪತಿಗೆ ಒಂದು ವರ್ಷದ ಮಗುವಿದೆ. ಸಂತೋಷ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ರೇಖಾ ಗೃಹಿಣಿಯಾಗಿದ್ದಳು. ಇಬ್ಬರು ಮೊದಲು ಅನೋನ್ಯತೆಯಿಂದಲೇ ಇದ್ದರು. ಕಾಲಕ್ರಮೇಣ ವರದಕ್ಷಿಣೆಗಾಗಿ ನೀಡುವಂತೆ ಸಂತೋಷ್ ಪೀಡಿಸುತ್ತಿದ್ದ ಎನ್ನಲಾಗಿದೆ. ಮದುವೆ ವೇಳೆ ಚಿನ್ನ-ಹಣವನ್ನು ವರದಕ್ಷಿಣೆ ರೂಪದಲ್ಲಿ ರೇಖಾ ಮನೆಯವರು ನೀಡಿದ್ದರು. ಅಷ್ಟಾದರೂ ಸೈಟ್‌ಗಾಗಿ ಸಂತೋಷ್ ಕುಟುಂಬದವರು ರೇಖಾಗೆ ಮಾನಸಿಕವಾಗಿ ಹಿಂಸೆ ನೀಡಿ ಹಲ್ಲೆ ಮಾಡಿ ಕೊಲೆ ಮಾಡಿ ಬಳಿ ರೇಖಾ ತನ್ನ ಸೀರೆಯಿಂದ ಪ್ಯಾನ್‌ಗೆ ನೇಣು ಬಿಗಿದುಕೊಂಡಿರುವಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರವಷ್ಟೇ ರೇಖಾ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.