

ಕೋಲಾರ: ಕರ್ತವ್ಯಲೋಪ ಆರೋಪದಡಿ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಆಂಧ್ರಪ್ರದೇಶದ ಟಿಡಿಪಿ ಶಾಸಕನ ಬೆಂಬಲಿಗನನ್ನು ಕೊಲೆ ಮಾಡಲು ಸುಪಾರಿ ಪಡೆದುಕೊಂಡಿದ್ದ ಪ್ರಕರಣದಡಿ ಗಂಗಾವರಂ ಪೊಲೀಸರ ಬಂಧನದಲ್ಲಿರುವ ಕೋಲಾರ ಗ್ರಾಮಾಂತರ ಠಾಣೆ ಪೇದೆ ವಿನಾಯಕ್ ಹಾಗೂ ಎಸ್ಪಿ ಕಚೇರಿಯಲ್ಲಿ ಸಿಡಿಆರ್ ತೆಗೆಯುತ್ತಿದ್ದ ಪೇದೆ ನಾಗರಾಜ್ನನ್ನು ಅಮಾನತು ಮಾಡಿದ್ದಾರೆ.
ರಘುಚಂದ್ರ ಗುಪ್ತ ಎಂಬುವರನ್ನು ಕೊಲೆ ಮಾಡಲು ಕೋಲಾರ ಗ್ರಾಮಾಂತರ ಠಾಣೆಯ ಕೆಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿನಾಯಕ ಸುಪಾರಿ ಪಡೆದುಕೊಂಡಿದ್ದ. ಚಿತ್ತೂರು ಜಿಲ್ಲೆಯ ಹೆದ್ದಾರಿಯಲ್ಲಿ ವಾಹನ ಅಪಘಾತ ಮಾಡಿಸಿ ಕೊಲೆ ಮಾಡಲು ಪ್ಲಾನ್ ಹಾಕಿದ್ದರು. ಅದರಂತೆ ಈಚರ್ ವಾಹನ ಚಾಲಕನಿಗೆ ಹೇಳಿ ಡಿಕ್ಕಿ ಹೊಡೆದು ಹತ್ಯೆ ಮಾಡಲು ಹೇಳಿದ್ದ. ಅದೃಷ್ಟವಶಾತ್ ರಘುಚಂದ್ರಗುಪ್ತ ಪ್ರಾಣಾಪಾಯದಿಂದ ಪಾರಾಗಿ ಗಂಗಾವರಂ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಿದ್ದ ಪೊಲೀಸರು ವಿನಾಯಕನ್ನು ಬಂಧಿಸಿದ್ದಾರೆ. ಪ್ರಕರಣ ಹಿನ್ನೆಲೆ ಕೋಲಾರ ಎಸ್ಪಿ ನಿಖಿಲ್ ಅವರು ವಿನಾಯಕ್ ಹಾಗೂ ಅವನಿಗೆ ನೆರವಾಗಿದ್ದ ಸಿಡಿಆರ್ ನಾಗರಾಜ್ ಇಬ್ಬರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.