

ಮಧ್ಯಪ್ರದೇಶ: ಬಿಜೆಪಿಯ ಮಾಜಿ ನಾಯಕ ಮಿಶ್ರಿ ಚಂದ್ ಗುಪ್ತಾ ಮಾಲೀಕತ್ವದ ಹೋಟೆಲ್ ಒಂದನ್ನು ಮಂಗಳವಾರ ಕೆಡವಲಾಗಿದೆ. ಕಳೆದ ವಾರವಷ್ಟೇ ಈ ಬಿಜೆಪಿ ಮುಖಂಡ, ವ್ಯಕ್ತಿ ಒಬ್ಬನ ಮೇಲೆ ಕಾರ್ ಹರಿಸಿ ಕೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.
ಇಂದು ಮುಂಜಾನೆ, ಹೋಟೆಲ್ ಸುತ್ತಲೂ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇತ್ತೀಚೆಗೆ ಮಧ್ಯಪ್ರದೇಶದ ಸಾಗರ್‌ನ ಮಕ್ರೋನಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಕಾರು ಹರಿಸಿ ವ್ಯಕ್ತಿಯೊಬ್ಬರ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಮುಖಂಡ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಘಟನೆಯಿಂದ ಆಕ್ರೋಶಗೊಂಡ ಜನರು, ಬಿಜೆಪಿ ಮುಖಂಡರ ಹೋಟೆಲ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಕೋರೆಗಾಂವ್ ಗ್ರಾಮಸ್ಥರು ಮಕ್ರೋನಿಯಾ ಅಡ್ಡರಸ್ತೆಯಲ್ಲಿ ಮೃತದೇಹವನ್ನು ಇಟ್ಟು ಪ್ರತಿಭಟನೆ ಕೂಡ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಬಿಜೆಪಿ ನಾಯಕನ ಹೋಟೆಲ್ ಅನ್ನು ಭಾರೀ ಪೊಲೀಸ್ ಬಂದೋಬಸ್ತಿನಲ್ಲಿ ಕೆಡವಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಜಗದೀಶ್ ಯಾದವ್ (30) ಎಂದು ಗುರುತಿಸಲಾಗಿದ್ದು, ಈತ ಕೋರೆಗಾಂವ್ ನಿವಾಸಿ ಎಂದು ತಿಳಿದುಬಂದಿದೆ. ಈತ ಡೈರಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಘಟನೆಯ ರಾತ್ರಿ, ಡೈರಿ ಫಾರ್ಮ್‌ನಿಂದ ಕಾರು ತೆಗೆದುಕೊಳ್ಳಲು ಜಗದೀಶ್ ಯಾದವ್ ಹೋಗಿದ್ದರು, ಅಲ್ಲಿ ಅವರು ಹಳೆಯ ವಿವಾದದ ಕುರಿತು ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದರು.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಆರೋಪಿಗಳು ಮನಬಂದಂತೆ ಈತನನ್ನು ಥಳಿಸಿದ್ದಾರೆ. ಆರೋಪಿಗಳು ತಮ್ಮ ಕಾರಿನಲ್ಲಿ ಕುಳಿತು ಸಂತ್ರಸ್ತನ ಮೇಲೆ ವಾಹನ ಹರಿಸಿ ಪರಾರಿಯಾಗಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು. (ಏಜೆನ್ಸೀಸ್)