ಅಕ್ರಮ ಸಂಬಂಧ ಶಂಕೆ; ದೃಶ್ಯಂ ಚಿತ್ರ ಶೈಲಿಯಲ್ಲಿ ಪತ್ನಿ ಕೊಂದು ಸ್ಮಶಾನದಲ್ಲಿ ಹೂತುಹಾಕಿದ ಪತಿ| Wife Murder

WhatsApp Image 2025-08-20 at 4.15.04 PM
Published on

Wife Murder: ಪತಿಯೊಬ್ಬ ತನ್ನ ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಬುಧವಾರ (ಆಗಸ್ಟ್ 20) ವರದಿಯಾಗಿದೆ.

ಕೊಲೆ ಮಾಡಿ ಸ್ಮಶಾನದಲ್ಲಿ ಹೂಳಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಪತಿ ಪೇಂಟರ್ ಶಬಾಬ್ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಪತ್ನಿ ಫಾತಿಮಾಳನ್ನು(30) ಕೊಲೆಯಾಗಿರುವ ಮಹಿಳೆ.

ಕೊಲೆ ಮಾಡಿ ಸಿಕ್ಕಿಬೀಳುವುದನ್ನು ತಪ್ಪಿಸಲು, ಶಾದಾಬ್ ತನ್ನ ಊರು ಉತ್ತರ ಪ್ರದೇಶದ ಅಮ್ರೋಹಾಗೆ ಹಿಂತಿರುಗಿ ಫಾತಿಮಾಳ ಫೋನ್‌ನಿಂದ ನಾನು ಮನೆಯಿಂದ ಓಡಿ ಹೋಗಿದ್ದು, ಬೇರೊಬ್ಬನನ್ನು ಮದುವೆಯಾಗುತ್ತಿದ್ದೇನೆ ಎಂಬಂತೆ ಸಂದೇಶ ಕಳುಹಿಸಿಕೊಂಡಿದ್ದಾನೆ. ಆಗಸ್ಟ್ 10 ರಂದು ಮೃತಳ ಸ್ನೇಹಿತ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಆಕೆಯನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಶಂಕಿಸಿ ಸ್ನೇಹಿತ ದೂರು ನೀಡಿದ್ದನು. ತನಿಕೆ ವೇಳೆ ಹೊರಬಂದ ಸಿಸಿಟಿವಿ ದೃಶ್ಯಾವಳಿಯಲ್ಲಿ ಫಾತಿಮಾ ತನ್ನ ಪತಿ ಮತ್ತು ಅವರ ಸಹಚರರೊಂದಿಗೆ ಇರುವುದು ಕಂಡುಬಂದಿದೆ. ದೃಶ್ಯಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಡಿಸಿಪಿ ಅಂಕಿತ್ ಚೌಹಾಣ್, ಆರೋಪಿ ತನ್ನ ಪತ್ನಿಗೆ ಕೀಟನಾಶಕಗಳನ್ನು ಕುಡಿಸಿ ಐದು ದಿನಗಳ ಕಾಲ ಮಾದಕ ಮಾತ್ರೆಗಳನ್ನು ನೀಡಿ ಸಾಯಿಸಿದ್ದಾನೆ. ಬಳಿಕ ಆರೋಪಿಯು ತನ್ನ ಸಹಚರರಾದ ಶಾರುಖ್ ಖಾನ್, ತನ್ವೀರ್ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಆಕೆಯ ಶವವನ್ನು ಕಾರಿನಲ್ಲಿ ಮೆಹ್ರೌಲಿಯಲ್ಲಿರುವ ಸ್ಮಶಾನಕ್ಕೆ ಸಾಗಿಸಿದ್ದು, ಅಲ್ಲಿ ಹೂತುಹಾಕಿದ್ದಾನೆ. ಆಕೆಯ ಬಟ್ಟೆಗಳನ್ನು ಕಾಲುವೆಗೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

ಪತಿಯ ತಪ್ಪೊಪ್ಪಿಗೆಯ ಆಧಾರದ ಮೇಲೆ, ಪೊಲೀಸರು ಫಾತಿಮಾ ಅವರ ಮೃತದೇಹವನ್ನು ಆಗಸ್ಟ್ 15 ರಂದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಸಮ್ಮುಖದಲ್ಲಿ ಹೊರತೆಗೆದಿದ್ದಾರೆ. ಶಾದಾಬ್, ಶಾರುಖ್ ಮತ್ತು ತನ್ವೀರ್ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಮೃತದೇಹವನ್ನು ವಿಲೇವಾರಿ ಮಾಡಲು ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ

ಆರೋಪಿಯ ತಪ್ಪೊಪ್ಪಿಗೆ

ಆರಂಭದಲ್ಲಿ ಪತಿ ಶಾದಾಬ್ ತಾನು ಏನು ಮಾಡಿಲ್ಲ ಎಂಬಂತೆ ಇದ್ದನು. ತನ್ನ ಮೇಲೆ ಬಂದ ಆರೋಪವನ್ನು ನಿರಾಕರಿಸಿದ್ದನು. ಆದಾಗ್ಯೂ, ಹೆಚ್ಚಿನ ವಿಚಾರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಫಾತಿಮಾ ವಿವಾಹೇತರ ಸಂಬಂಧವನ್ನು ಹೊಂದಿದ್ದಳು, ಇದರಿಂದಾಗಿ ಅವಳನ್ನು ಕೊಲೆ ಮಾಡಲು ಯೋಚಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆ ಮಾಡಲು ಸಂಚು ರೂಪಿಸಿದ ಬಳಿಕ ಆಕೆಗೆ ನಿದ್ದೆ ಮಾತ್ರೆಗಳನ್ನು ನೀಡಿದ್ದು ಪ್ರಜ್ಞೆ ಕಳೆದುಕೊಂಡಿದ್ದಾಳೆ ಎನ್ನಲಾಗಿದೆ. ನಂತರ ಆಕೆಯನ್ನು ಫತೇಪುರ್ ಬೆರಿಯಲ್ಲಿರುವ ಮನೆಗೆ ಕರೆತಂದನು, ಅಲ್ಲಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಜುಲೈ 31 ರವರೆಗೆ ಆಕೆಯನ್ನು ಅಲ್ಲೇ ಇರಿಸಿಕೊಂಡಿದ್ದು, ಈ ವೇಳೆ ಆಕೆಗೆ ಕೀಟನಾಶಕ ಮಾತ್ರೆ ಕೊಟ್ಟಿದ್ದಾನೆ ಎನ್ನಲಾಗಿದ್ದು, ಅದನ್ನು ಸೇವಿಸಿದ ಬಳಿಕ ಆಕೆಗೆ ನೋವು ಶುರುವಾಗಿದೆ. ತಕ್ಷಣ ಕಾಂಪೌಂಡರ್ ಹತ್ತಿರ ಕರೆದೊಯ್ದಿದ್ದಾನೆ. ನಂತರ ಮತ್ತೆ ಮೆಹ್ರೌಲಿಯಲ್ಲಿರುವ ಅವರ ಮನೆಗೆ ಕರೆತಂದಿದ್ದು,  ಆಗಸ್ಟ್ 1 ರಂದು ಪತ್ನಿ ಫಾತೀಮಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮರುದಿನ ರಾತ್ರಿ, ಅವನು ಮತ್ತು ಅವನ ಸಹಚರರು ಆಕೆಯ ಶವವನ್ನು ಕಾರಿನಲ್ಲಿ ಇರಿಸಿ ಸ್ಮಶಾನಕ್ಕೆ ಹೊಯ್ದು ಹೂತು ಹಾಕಿದ್ದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net