ಸುಶಾಂತ್​ ಸಿಂಗ್​ ರಜಪೂತ್​ ಬಳಸುತ್ತಿದ್ದ ಸಿಮ್​ ಕಾರ್ಡ್​ಗಳು ಅವರ ಹೆಸರಿನಲ್ಲಿ ಇರಲಿಲ್ಲ...

sushant
Published on

ಪಟನಾ: ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣ ದಿನದಿನಕ್ಕೂ ನಿಗೂಢವಾಗುತ್ತಲೇ ಸಾಗುತ್ತಿದೆ. ಇದೀಗ ಅವರು 50ಕ್ಕೂ ಹೆಚ್ಚು ಸಿಮ್​ಕಾರ್ಡ್​ಗಳನ್ನು ಬಳಸುತ್ತಿದ್ದರು. ತುಂಬಾ ತ್ವರಿತವಾಗಿ ಅವರು ಮೊಬೈಲ್​ ನಂಬರ್​ಗಳನ್ನು ಬದಲಿಸುತ್ತಿದ್ದರು ಎಂಬ ಮಾತು ಕೇಳಿ ಬಂದ ಹಿಂದೆಯೇ, ಅವರು ಬಳಸುತ್ತಿದ್ದ ಸಿಮ್​ಕಾರ್ಡ್​ಗಳು ಯಾವುವೂ ಅವರ ಹೆಸರಿನಲ್ಲಿ ನೋಂದಣಿಯಾಗಿರಲಿಲ್ಲ ಎಂಬ ಸಂಗತಿ ಬಹಿರಂಗಗೊಂಡಿದೆ.

ಅವರು ಬಳಸುತ್ತಿದ್ದ ಒಂದು ಸಿಮ್​ಕಾರ್ಡ್​ ಅವರ ಫ್ಲ್ಯಾಟ್​ಮೇಟ್​ ಹಾಗೂ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಸಿದ್ಧಾರ್ಥ್​ ಪಿಥಾನಿ ಅವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂಬ ಸಂಗತಿ ಪತ್ತೆಯಾಗಿದೆ. ವಾಸ್ತವದಲ್ಲಿ ಸುಶಾಂತ್​ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮೊದಲ ವ್ಯಕ್ತಿ ಇವರದ್ದಾಗಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರು ಇದೀಗ ಸುಶಾಂತ್​ ಅವರ ಕಾಲ್​ ಡಿಟೇಲ್​ ರೆಕಾರ್ಡ್​ಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಜತೆಗೆ ಸುಶಾಂತ್​ ಆತ್ಮಹತ್ಯೆಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಅವರ ಕುಟುಂಬ ವರ್ಗದವರನ್ನು ಕೂಡ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ದಿಶಾ ಅವರ ಕುಟುಂಬ ವರ್ಗದವರು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಕಳೆದ ಕೆಲವು ತಿಂಗಳಲ್ಲಿ ಸುಶಾಂತ್​ ಸಿಂಗ್​ ರಜಪೂತ್​ 50 ಬಾರಿ ಸಿಮ್​ಕಾರ್ಡ್​ ಬದಲಿಸಿದ್ದರು. ಅವರ ಕುಟುಂಬ ವರ್ಗದವರಿಗೆ ಕೂಡ ಸುಶಾಂತ್​ ಯಾವ ಮೊಬೈಲ್​ಸಂಖ್ಯೆಯನ್ನು ಬಳಸುತ್ತಿದ್ದಾರೆ ಎಂಬುದು ತಿಳಿಯದಾಗಿತ್ತು. ಅವರು ಅಷ್ಟು ತ್ವರಿತವಾಗಿ ಮೊಬೈಲ್​ ಸಂಖ್ಯೆಗಳನ್ನು ಬದಲಿಸುತ್ತಿದ್ದರು ಎಂದು ಸುಶಾಂತ್​ ಅವರ ಸ್ನೇಹಿತೆ ಸ್ಮಿತಾ ಪಾರೀಖ್​ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net