

ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ತನಿಖೆ ಒಂದೆಡೆ ಸಾಗಿದರೆ, ಆರೋಪ, ಪ್ರತ್ಯಾರೋಪಗಳು ಮತ್ತೊಂದೆಡೆ. ರಾಜಕೀಯದವರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಾದ ಮೇಲೊಂದರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಸುಶಾಂತ್ ಮತ್ತು ಆತನ ತಂದೆ ಕೆಕೆ ಸಿಂಗ್ ಮಧ್ಯೆದ ಸಂಬಂಧ ಹಳಸಿತ್ತು. ತಂದೆಯ ಎರಡನೇ ಮದುವೆ ಸುಶಾಂತ್ಗೆ ಇಷ್ಟವಿರಲಿಲ್ಲ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು ಶಿವಸೇನೆ ಸಂಸದ ಸಂಜಯ್ ರಾವತ್. ಇದೀಗ ಇದೇ ಸಂಸದರು, ಮಾತಿನ ವರಸೆಯನ್ನೇ ಬದಲಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಮಲ್ಯ ಕುರಿತ ವೆಬ್ಸಿರೀಸ್ಗೆ ನಡೆದಿದೆ ತಯಾರಿ
ಹೌದು, ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃದುಧೋರಣೆ ತಾಳಿರುವ ಸಂಜಯ್ ರಾವತ್, ‘ಸುಶಾಂತ್ ನಮ್ಮ ಮಗ ಇದ್ದಂತೆ. ಬಾಲಿವುಡ್ ಎಂಬುದು ಮುಂಬೈನ ಕುಟುಂಬ. ಸುಶಾಂತ್ ಸಾವಿನ ಮರ್ಮವನ್ನು ನಾವೂ ತಿಳಿದುಕೊಳ್ಳಬೇಕು. ಅವರ ಕುಟುಂಬಕ್ಕೂ ನ್ಯಾಯ ದೊರಕಬೇಕು’ ಎಂದಿದ್ದಾರೆ.
ಈ ಮೊದಲು ಸುಶಾಂತ್ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಮಾತನಾಡಿದ್ದ ಸಂಜಯ್ ರಾವತ್ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಕೂಡಲೇ ಕ್ಷಮಾಪಣೆ ಕೋರುವಂತೆ ನೆಟ್ಟಿಗರು ಆಗ್ರಹಿಸಿದ್ದರು. ಅದರಂತೆ ಶುಕ್ರವಾರ ಸುಶಾಂತ್ ಕುಟುಂಬಕ್ಕೆ ಕ್ಷಮೆ ಕೋರಿದ್ದಾರೆ.
‘ಸುಶಾಂತ್ ಕುಟುಂಬ ಸ್ವಲ್ಪ ತಾಳ್ಮೆಯಲ್ಲಿರಬೇಕು ಎಂದು ನಾನು ಹೇಳಿದ್ದೆ. ಆದರೆ ನಾನು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಅಷ್ಟಕ್ಕೂ ಅದು ಬೆದರಿಕೆಯೇ? ಮುಂಬೈ ಪೊಲೀಸರನ್ನು ನಂಬಿರಿ. ಅವರು ಉತ್ತಮ ಕೆಲಸ ಮಾಡುತ್ತಿಲ್ಲ ಎಂದು ನೀವು ಭಾವಿಸಿದರೆ, ನಂತರ ಸಿಬಿಐಗೆ ಹೋಗಲಿ’ ಎಂದು ತಾವಾಡಿದ ಮಾತಿಗೆ ಸಮಜಾಯಿಷಿ ಕೊಟ್ಟಿದ್ದಾರೆ. (ಏಜೆನ್ಸೀಸ್)