

ಮುಂಬೈ: ಜೀವನದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಎಲ್ಲರೂ ಆಗಾಗ ಅಂದುಕೊಳ್ಳುತ್ತಾರೆ. ಕೆಲವರು ತಾವು ಅಂದುಕೊಂಡಿದ್ದೆಲ್ಲವನ್ನೂ ಬರೆದಿಟ್ಟುಕೊಂಡು ಒಂದೊಂದಾಗಿ ಎಲ್ಲವನ್ನೂ ಸಾಧಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಾರೆ.
ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಕೂಡ ಎಲ್ಲರಂತೆ ಹಲವು ಕನಸುಗಳನ್ನು ಹೊಂದಿದ್ದರು. ತಮ್ಮೆಲ್ಲ ಕನಸುಗಳನ್ನು ಪಟ್ಟಿ ಮಾಡಿ ಟ್ವೀಟ್ ಮಾಡಿದ್ದರು. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ಬಾಹ್ಯಾಕಾಶಯಾನದ ತರಬೇತಿ ಪಡೆಯುವುದು, 100 ಮಕ್ಕಳನ್ನು ನಾಸಾದ ಕಾರ್ಯಾಗಾರಕ್ಕೆ ಕಳುಹಿಸುವುದು, 100 ತಾಯಂದಿರ ಬಯಕೆಗಳನ್ನು ಈಡೇರಿಸುವುದು, ಚಂದ್ರನ ಒಂದು ಭಾಗವನ್ನು ತಮ್ಮದಾಗಿಸಿಕೊಳ್ಳುವುದು, ಸ್ಮಶಾನದಲ್ಲಿ ಒಂದು ರಾತ್ರಿ ಕಳೆಯುವುದು, ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನು ಖರೀದಿಸುವುದು ಸೇರಿ ಒಟ್ಟು 50ಕ್ಕೂ ಹೆಚ್ಚು ಬಯಕೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಇಂಜಿನಿಯರಿಂಗ್ ಪದವಿ ವ್ಯಾಸಂಗವನ್ನು ಬಿಟ್ಟು ನಟನಾಗಲು ಮುಂದಾಗಿದ್ದ ಅವರು ತಾವು ಓದುತ್ತಿದ್ದ ದೆಹಲಿಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ತಾವು ಇರುತ್ತಿದ್ದ ಬಿಎಂಎಚ್-131 ಕೊಠಡಿಯಲ್ಲಿ ಒಂದು ಇಡೀ ದಿನ ಮತ್ತು ರಾತ್ರಿ ಕಳೆಯುವುದು, ಯಾವುದೇ ಪರೀಕ್ಷೆಗೂ ಹಾಜರಾಗದೆ ಪದವಿ ಪ್ರಮಾಣಪತ್ರ ಪಡೆದುಕೊಳ್ಳುವ ಬಯಕೆಯಗಳನ್ನೂ ಹೊಂದಿದ್ದರು.
ಸಮುದ್ರದಲ್ಲಿ ಮುಳುಗಿರುವ ಪುರಾತನ ದ್ವಾರಕ ನಗರದ ಅಧ್ಯಯನಕ್ಕಾಗಿ ಡೈವಿಂಗ್ ಮಾಡುವುದು, ವೇದಗಳನ್ನು ಸ್ವತಃ ಓದಿ, ಅರ್ಥ ಮಾಡಿಕೊಳ್ಳುವುದು, ಒಂದು ಶತಕೋಟಿ ಜನರನ್ನು ಸಬಲೀಕರಣಗೊಳಿಸಲು ಸಮರ್ಪಕವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕನಸೂ ಅವರದ್ದಾಗಿತ್ತು.
ಆದರೆ ಇಷ್ಟೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳುವ ಮುನ್ನವೇ ಮಹೇಂದ್ರ ಸಿಂಗ್ ಧೋನಿಯವರ ಜೀವನಾಧಾರಿತ ಚಿತ್ರದ ನಟ ತಮ್ಮ 34ನೇ ವಯಸ್ಸಿನಲ್ಲೇ ಇಹಲೋಕದಿಂದ ನಿವೃತ್ತಿ ಹೊಂದಿದ್ದಾರೆ.
ಅಭಿಮಾನಿಗಳು ಅವರ ಈ ಎಲ್ಲ ಕನಸುಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು, ಇಷ್ಟೊಂದು ಕನಸುಗಳನ್ನು ಈಡೇರಿಸಿಕೊಳ್ಳುವ ಮುನ್ನವೇ ಬಾರದ ಲೋಕಕ್ಕೆ ಹೋಗಿದ್ದಕ್ಕಾಗಿ ದುಃಖ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.