ಸುಶಾಂತ್​ ಸಿಂಗ್​ ಉಗುರುಗಳಲ್ಲಿ ಅಡಗಿದೆಯಾ ಸಾವಿನ ಹಿನ್ನೆಲೆ?; ಮುಂಬೈ ಪೊಲೀಸ್​ ಕಾಯುತ್ತಿದೆ ಆ ವರದಿಗಾಗಿ...

Sush
Published on

ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಶರಣಾಗಿ ಒಂದೂವರೆ ತಿಂಗಳಾಗುತ್ತ ಬಂತು. ಈಗಲೂ ಅವರ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆ ವಿಚಾರಣೆ ಮುಂದುವರಿಸಿದರೆ, ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿತ್ಯ ಒಂದಿಲ್ಲೊಂದು ಹೇಳಿಕೆಯನ್ನು ನೀಡುತ್ತಿದೆ. ಇದೀಗ ಸುಶಾಂತ್​ ವಿಸೆರಾ (ಒಳಾಂಗಗಳ) ವರದಿ ಬಹಿರಂಗವಾಗಿದೆ.

ಮುಂಬೈನ ಬಾಂದ್ರಾ ಪೊಲೀಸ್​ ಕೋರಿಕೆ ಮೇರೆಗೆ ಕಲಿನ್​ ಫಾರೆನ್ಸಿಕ್​ ಲ್ಯಾಬ್​, ಸುಶಾಂತ್​ ಅವರ ಕರುಳು ಸೇರಿ ಕೆಲ ಅಂಗಾಂಗಗಳ ಬಗ್ಗೆ ವಿಸ್ತ್ರತ ವರದಿ ನೀಡಿದೆ. ಉಸಿರುಗಟ್ಟುವಿಕೆಯಿಂದಲೇ ಜೀವ ಹೋಗಿದೆ ಎಂಬುದು ದೃಢಪಟ್ಟಿದ್ದು, ಈ ಹಿಂದಿನ ಹಲವು ಸಂದೇಹಗಳಿಗೆ ತೆರೆಬಿದ್ದಿದೆ. ಹಾಗಾಗಿ ಇದೀಗ ವಿಸೆರಾ (ಒಳಾಂಗಗಳ) ವರದಿ ಬದಿಗಿಟ್ಟು ಬಾಕಿ ಉಳಿದ ಉಗುರು ಮತ್ತು ಹೊಟ್ಟೆಯ ವರದಿಗಾಗಿ ಮುಂಬೈ ಪೊಲೀಸರು ಕಾಯುತ್ತಿದ್ದಾರೆ.

ಸದ್ಯ ಪೊಲೀಸ್​ ಇಲಾಖೆಗೆ ವಿಸೆರಾ ವರದಿಗಿಂತ ಉಗುರಿನ ವರದಿ ಬಹುಮುಖ್ಯವಾಗಿ ಬೇಕಾಗಿದೆ. ಉಗುರಿನ ಗುರುತುಗಳ ಆಧಾರದ ಮೇಲೆ ಸುಶಾಂತ್​ ಸಾವಿಗೆ ಟ್ವಿಸ್ಟ್ ಸಿಕ್ಕರೂ ಸಿಗಬಹುದು. ಅದರ ಆಧಾರದ ಮೇಲೆ ಇದು ಆತ್ಮಹತ್ಯೆಯೂ ಅಥವಾ ಕೊಲೆಯೋ ಎಂಬ ಬಗ್ಗೆ ಸುಳಿವು ಸಿಗಲಿದೆ. ಸಾಯುವಾಗಿನ ಸ್ಥಿತಿಗತಿಯ ಬಗ್ಗೆ ಉಗುರುಗಳಿಂದಲೇ ಮಾಹಿತಿ ಲಭ್ಯವಾಗಲಿರುವುದರಿಂದ ಎಲ್ಲರ ದೃಷ್ಟಿ ಅತ್ತ ನೆಟ್ಟಿದೆ.

ಈ ಮೊದಲು ಸುಶಾಂತ್​ ಮರಣೋತ್ತರ ಪರೀಕ್ಷೆ ವೇಳೆ ಐವರು ವೈದ್ಯರ ತಂಡ ಉಸಿರುಗಟ್ಟುವಿಕೆಯಿಂದಲೇ ಜೀವ ಹೋಗಿರುವ ಬಗ್ಗೆ ವರದಿ ನೀಡಿತ್ತು. ಇದೀಗ ಮತ್ತದೇ ವರದಿ ಬಂದಿದ್ದು, ಸುಶಾಂತ್​ ಸಾವಿನ ಬಗ್ಗೆ ಇದ್ದ ಒಂದಷ್ಟು ಗೊಂದಲಗಳಿಗೆ ಉತ್ತರ ಸಿಕ್ಕಂತಾಗಿದೆ

ಇನ್ನು ಇತ್ತ ಬಾಲಿವುಡ್​ನ ಘಟಾನುಘಟಿಗಳ ವಿಚಾರಣೆ ಮಾಡುವ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೇ ಕರಣ್​ ಜೋಹರ್​ ಧರ್ಮ ನಿರ್ಮಾಣ ಸಂಸ್ಥೆಯ ಸಿಇಒ, ಕಂಗನಾ ರಣಾವತ್​ ಮತ್ತು ಮಹೇಶ್ ಭಟ್​ಗೆ ಮುಂಬೈ ಪೊಲೀಸ್ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ಮಹೇಶ್​ ಭಟ್ ಆಗಮಿಸಿ ಪೊಲೀಸರಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net