ರಿಯಾ ಚಕ್ರವರ್ತಿಯಿಂದ ನನ್ನ ಜೀವಕ್ಕೆ ಅಪಾಯ ಆಗಬಹುದು ಎಂದಿದ್ದರಂತೆ ಸುಶಾಂತ್​

sushant_rhea
Published on

ಮುಂಬೈ: ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಅವರಿಂದ ತಮ್ಮ ಜೀವಕ್ಕೆ ಅಪಾಯ ಒದಗಬಹುದು ಎಂದು ನಟ ಸುಶಾಂತ್​ ಸಿಂಗ್​ ರಜಪೂತ್​ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಈ ವರ್ಷದ ಫೆಬ್ರವತಿ 25ರಂದು ಬಾಂದ್ರಾ ಪೊಲೀಸ್​ ಠಾಣೆಗೆ ಹೋಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬದ ಸದಸ್ಯರು ಸುಶಾಂತ್​ ಅವರು ಒಳ್ಳೆಯವರೊಂದಿಗೆ ಒಡನಾಟ ಹೊಂದಿಲ್ಲ. ದಯವಿಟ್ಟು ಅವರಿಗೆ ಏನೂ ಆಪಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಸುಶಾಂತ್​ ಸಂಪೂರ್ಣ ರಿಯಾ ಅವರ ಹಿಡಿತದಲ್ಲಿದ್ದರು ಎಂದು ಸುಶಾಂತ್​ ಸಿಂಗ್​ ರಜಪೂತ್​ ಅವರು ಕುಟುಂಬದ ಪರ ವಕೀಲ ವಿಕಾಸ್​ ಸಿಂಗ್​ ಹೇಳಿದ್ದಾರೆ.

ಈ ವಿಚಾರವಾಗಿ ನಾವು ರಿಯಾ ಅವರ ವಿರುದ್ಧ ದೂರು ಕೊಡಲು ಹೋದಾಗ ಬಿಹಾರ ಪೊಲೀಸರು ಎಫ್​ಐಆರ್​ ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ, ಸಿಎಂ ನಿತೀಶ್​ ಕುಮಾರ್​ ಮಧ್ಯಪ್ರವೇಶಿಸಿದ ಬಳಿಕ ಎಫ್​ಐಆರ್​ ದಾಖಲಿಸಿಕೊಂಡಿದ್ದಾಗಿ ಹೇಳಿದ್ದಾರೆ.

ತಕ್ಷಣವೇ ಬಂಧಿಸಿ: ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟಿ ರಿಯಾ ಚಕ್ರವರ್ತಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ವಿಕಾಸ್​ ಕುಮಾರ್​ ಆಗ್ರಹಿಸಿದರು. ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಾತ್ರ ಸತ್ಯ ಹೊರಬರಲು ಸಾದ್ಯ ಎಂದು ಹೇಳಿದರು.

ರಿಯಾ ಅವರು ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ಅವರ ಕುಟುಂಬದಿಂದ ದೂರ ಮಾಡಿದ್ದರು. ಕನಿಷ್ಠ ತಮ್ಮ ತಂದೆ ಅಥವಾ ತಮ್ಮ ಕುಟುಂಬದ ಸದಸ್ಯರ ಜತೆ ಮಾತನಾಡುವ ಸ್ವಾತಂತ್ರ್ಯವೂ ಅವರಿಗೆ ಇಲ್ಲವಾಗಿತ್ತು ಎಂದು ಪ್ರತಿಪಾದಿಸಿದರು.

ಮುಂಬೈ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಕಾಸ್​ ಸಿಂಗ್​, ಮುಂಬೈ ಪೊಲೀಸರು ಬೇರೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್​ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಆದರೆ, ಅವರು ಈ ವಿಷಯವಾಗಿ ರಿಯಾ ಚಕ್ರವರ್ತಿ ಅವರನ್ನು ತನಿಖೆಗೆ ಒಳಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಾವು ರಿಯಾ ವಿರುದ್ಧ ಪಟನಾದಲ್ಲಿ ದೂರು ದಾಖಲಿಸಬೇಕಾಯಿತು ಎಂದು ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net