ಆವಬಲವಿಡಿದು... ಜೀವಿಸುವೇ?

ವಿಜಯವಾಣಿ (2)
Published on

ಮನುಷ್ಯ ತನ್ನ ಇತಿ-ಮಿತಿ ಮೀರಿದ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾದರೆ ಆ ಪ್ರಸಂಗವನ್ನು ಅರಗಿಸಿಕೊಳ್ಳುವ ಧೈರ್ಯ ಬೇಕಲ್ಲವೇ? ಆ ಧೈರ್ಯಕ್ಕೆ ಹಣವೋ? ಸ್ವಜನರ ಬಲವೋ? ದೈವ, ಸ್ವಶಕ್ತಿ ಬಲವೋ? ನಾಡಕಿಡಿಗೇಡಿಗಳ ಬಲವೋ?... ಆಧಾರಬೇಕಲ್ಲವೇ? ಉದಾ: ಒಬ್ಬ ವಿವಾಹಿತ ಹೆಣ್ಣುಮಗಳು ಕಲಹ ಪ್ರಸಂಗ ಬಂದರೆ, ಗಂಡನ ದೊಡ್ಡಸ್ತಿಕೆ ಮುಂದು ಮಾಡಿ ಧೈರ್ಯದಿಂದ ಮಾತನಾಡುವಳು.

ಗಂಡನೊಂದಿಗೇ ಕಲಹದ ಪ್ರಸಂಗ ಬಂದಲ್ಲಿ ತಾಳಿಯ ಬಲದಿಂದ ದೈರ್ಯವಾಗಿ ಮಾತಾಡುತ್ತಾಳೆ ಇದು ಲೌಕಿಕ ಉದಾಹರಣೆಯಾದರೆ - ಪಾರಮಾರ್ಥಿಕ ಕ್ಷೇತ್ರದ ಉದಾಹರಣೆಯನ್ನು ಶ್ರೀ ನಿಜಗುಣರ ವಾಣಿಯಲ್ಲಿ ಕೇಳೋಣ: ‘ಆವಬಲವಿಡಿದು ಅದಕಳುಕದಖಿಳದುರಿತವನೆಸಗಿ ಜೀವಿಸುವೇ?’ ಮನುಷ್ಯನೇ! ಅದಾವ ಬಲದಿಂದ ಅಳುಕದೇ ಅಖಿಳ ಪಾಪವ ಮಾಡಿ ಜೀವಿಸುವೇ?. ನೀನು ಮಾಡುವ ಪಾಪಕ್ಕೆ ಪ್ರಾಯಶ್ಚಿತ ಇಲ್ಲವೆಂದು ತಿಳಿದಿರುವೆಯಾ? ಮೃತ್ಯು ದೇವತೆ ನಿನ್ನನ್ನು ಮರೆತು ಬಿಡುವಳೇ? ನೀನು ಮಾಡಿದ ಪಾಪಾದಿ ಕರ್ಮಗಳ ಲೆಕ್ಕ ಬರೆದಿಡುವ ಚಿತ್ರ-ಗುಪ್ತರಿಗೆ ಮರವೆ ಬಂದಿದೆಯೇ? ಕಾಲದ ಕಲ್ಪನೆ ನೋಡಿಕೊ, ಕಳೆದುದು ಬಹಳ, ಉಳಿದದ್ದು ಸ್ವಲ್ಪ, ಕಾಲ ಯಾರ ದಾರಿ ಕಾಯುವುದಿಲ್ಲ. ಕಾಲಚಕ್ರಗತಿ ನಿನಗಾಗಿ ನಿಂತುಕೊಂಡಿಲ್ಲ.

ಇನ್ನು, ಬರುವ ದುಃಖಗಳು ಬಾರದೇ ನಿಂತುಕೊಂಡಿರುವವೋ? ರೋಗಗಳು ನಿನಗೆ ಬಾಧೆಕೊಡಬಾರದೆಂದು ಇಹಲೋಕ ಬಿಟ್ಟು ಹೋಗಿರು ವವೋ? ರೋಗಗಳ ತವರೂರು ಈ ದೇಹ. ಜರೆಯನೊಡಲೊಳುಗೂಡ ದಂತೆ - ಅಂದರೆ ಮುಪ್ಪು ಶರೀರದೊಳು ಕೂಡಿಕೊಳ್ಳದಂತೆ ಶಿಕ್ಷೆವಿಧಿಸಿ ದೆಯಾ? ಹುಟ್ಟು-ಸಾವುವಿಗೆ ಆಲಸ್ಯ ಬಂದಿದೆಯಾ? ದೇಹ ಮುಪ್ಪಾಗುವದು ತಪ್ಪಿದೆಯಾ? ಮುಪ್ಪು ಬರಬಾರದೆಂದು ವಜ್ರದಂಗಿ ತೊಟ್ಟುಕೊಂಡರೂ ಬರದಿರುವದೆ? ಚಿಂತೆ ಅಡಿಗಡಿಗೆ ಅವರಿಸದಂತೆ ದೂರಸರಿದಿದೆಯೇ? ತಾಯಿಗರ್ಭದಿಂದ ಹಿಡಿದು ಭೂಮಿಗರ್ಭದಲ್ಲಿ ಹೋಗುವವರೆಗೂ ಚಿಂತೆ-ಚಿತೆಯಾಗಿ ಸುಡುತ್ತಲಿದೆ. ಅಸ್ತತೆ, ಜಾಯತೇ, ವರ್ಧತೆ, ಪರಿಣಮತೆ, ಕ್ಷೀಯತೆ, ವಿನಸ್ಯತಿ, ಎಂಬ ಆರು ವಿಕಾರಗಳಿಂದ ದೇಹ ಪರಿವರ್ತನೆಗೊಳ್ಳುತ್ತಲಿದೆ. ಆವಬಲವಿಡಿದು ಪಾಪ ಮಾಡುವೆ? ಆವ ಬಲವೂ ನಿನಗಿಲ್ಲ! ಪಾಪಕೃತಿ ಮಾಡಬೇಡ. ಪರಮಾತ್ಮನನ್ನೊಲಿಸುವ ಸಾಧನೆ ಮಾಡಿ ಸುಖಿಯಾಗು ಎಂಬರ್ಥದಲ್ಲಿ ನಿಜಗುಣರು ಉಪದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net