15 ದಿನಗಳಲ್ಲಿ ಎರಡು ಕೋಟಿ ಮನೆ ಸಮೀಕ್ಷೆ ಅಸಾಧ್ಯ: ಬಿಜೆಪಿ | No hurry

BJP delegation
Published on

ಬೆಂಗಳೂರು: ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ)ಗೆ ತರಾತುರಿ ಅನಗತ್ಯವೆಂದು ರಾಜ್ಯ ಬಿಜೆಪಿ ತೀವ್ರವಾಗಿ ಆಕ್ಷೇಪಿಸಿ, ದಸರಾ ರಜೆ ಬದಲು ಬೇಸಿಗೆ ರಜಾ ದಿನಗಳಲ್ಲಿ ಸಮೀಕ್ಷೆ ಸೂಕ್ತ ಎಂದು ಪ್ರತಿಪಾದಿಸಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ಅವರನ್ನು ಪಕ್ಷದ ರಾಜ್ಯ ನಿಯೋಗ ಮಂಗಳವಾರ ಭೇಟಿಯಾಗಿ ಚರ್ಚಿಸಿ, ಹಲವು ಆಗ್ರಹಗಳನ್ನು ಮುಂದಿಟ್ಟಿತು. ನಂತರ ಶಾಸಕ ವಿ.ಸುನಿಲ್‌ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ 15 ದಿನಗಳ ದಸರಾ ರಜೆ ಬದಲಿಗೆ ಬೇಸಿಗೆ ರಜಾ ಅವಧಿಯಲ್ಲಿ ಸಾಕಷ್ಟು ಕಾಲಾವಕಾಶ ಲಭಿಸಲಿದೆ. ಸಮರ್ಪಕ, ನಿಖರ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಮನದಟ್ಟು ಮಾಡಿಕೊಡಲಾಗಿದೆ ಎಂದರು.

ಸಮೀಕ್ಷೆಗೆ 65 ಪ್ರಶ್ನಾವಳಿ, 150 ಮನೆಗಳಿಗೆ ಒಂದು ಬ್ಲಾಕ್ ಎಂದು ಗೊತ್ತುಪಡಿಸಲಾಗುತ್ತಿದೆ ಎಂಬ ಮಾಹಿತಿಯಿದೆ. ಒಂದು ಮನೆಯ ಸದಸ್ಯರ ಮಾಹಿತಿ ಸಂಗ್ರಹಿಸಿ ಅಪ್‌ಲೋಡ್ ಮಾಡಲು ಕನಿಷ್ಠ ಒಂದು ತಾಸು ಬೇಕಾಗುತ್ತದೆ.

ರಾಜ್ಯದ ಏಳು ಕೋಟಿ ಜನರು, 1.75 ರಿಂದ ಎರಡು ಕೋಟಿ ಮನೆಗಳ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ಮಾಡಿ ಮುಗಿಸುತ್ತೇವೆ ಎನ್ನುವುದು ಸುಲಭ ಸಾಧ್ಯವಲ್ಲ. ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಸರಿಯಲ್ಲವೆಂದು ಮನವರಿಕೆ ಮಾಡಿಕೊಟ್ಟಿದ್ದೇವೆ.

ಹುನ್ನಾರದ ಶಂಕೆ

ಒಟ್ಟು 1,400 ಜಾತಿಗಳನ್ನು ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಸರ್ಕಾರ ಅಥವಾ ಯಾವುದೇ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ.

ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಈ ರೀತಿ 107 ಹೊಸ ಜಾತಿಗಳನ್ನು ಪ್ರಕಟಿಸಿದ್ದಾರೆ. ಅವುಗಳನ್ನು ಕೋಡ್ ನಂಬರ್ ನೀಡಿರುವುದನ್ನು ಒಪ್ಪಲಾಗದು ಎಂದು ಸುನಿಲ್ ಕುಮಾರ್ ಹೇಳಿದರು.

ಇಡೀ ರಾಜ್ಯದಲ್ಲಿ ಇದೊಂದು ಜನಾಂದೋಲನ ಆಗುವ ಸಾಧ್ಯತೆಗಳಿವೆ. ಕ್ರಿಶ್ಚಿಯನ್ ಎಂದಾಗ 2-3 ಉಪಜಾತಿಗಳು, ಮುಸ್ಲಿಮರಲ್ಲಿ ಕೆಲವು ಉಪ ಜಾತಿ ಕೇಳಿದ್ದೆವು. ಎಲ್ಲ ಹಿಂದು ಉಪಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತ್ತೊಂದು ರೀತಿ ಮತಾಂತರಕ್ಕೆ ರಾಜ್ಯ ಸರ್ಕಾರ ಹುನ್ನಾರ ಮಾಡಿದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಹೊಸದಾಗಿ ಸೃಷ್ಟಿಸಿದ ಜಾತಿಗಳನ್ನು ಈ ಪಟ್ಟಿಯಿಂದ ಕೈಬಿಡಬೇಕು. ಈ ಸಮೀಕ್ಷೆಯು ಭವಿಷ್ಯದ ರಾಜ್ಯ ಸರ್ಕಾರಗಳ ಮುಂದಿನ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಭೂಮಿಕೆಯಾಗಲಿದ್ದು, ಅವಸರ ಮಾಡುವುದು ಬೇಡವೆಂದು ನಿಯೋಗಕ್ಕೆ ಕೋರಲಾಗಿದೆ ಎಂದರು.

ಈ ನಿಯೋಗದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ವಿ.ಸುನಿಲ್ ಕುಮಾರ್, ಎನ್.ರವಿಕುಮಾರ್, ದೊಡ್ಡನಗೌಡ ಪಾಟೀಲ್, ಹರತಾಳು ಹಾಲಪ್ಪ, ಪಕ್ಷದ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಮಾಜಿ ಶಾಸಕರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net