ಸಮೀಕ್ಷೆ ಕಾರ್ಯಕ್ಕೆ ಹರಸಾಹಸ

kgl survey
ಕಾರ್ಗಲ್ ಸಮೀಪದ ಹೆನ್ನಿ ಗ್ರಾಮದಲ್ಲಿ ಜಾತಿಗಣತಿ ಪೂರ್ಣಗೊಳಿಸಿದ ತಂಡ.
Published on

ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಟ್‌ವರ್ಕ್ ರಹಿತ ಎರಡು ವಾರ್ಡ್‌ಗಳಲ್ಲಿ ಅಧಿಕಾರಿಗಳ ವಿಶೇಷ ಕಾಳಜಿಯಿಂದಾಗಿ ಸಾಮಾಜಿಕ, ಶೈಕ್ಷಣಿಕ ಗಣತಿ ಕಾರ್ಯ ಯಶಸ್ವಿಯಾಗಿದೆ.

ಸಾಗರ ತಾಲೂಕು ಬಿಇಒ ಎಂ.ಪರಶುರಾಮಪ್ಪ ಹಾಗೂ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಅವರು ಜನರನ್ನು ಖಾಸಗಿ ವಾಹನಗಳಲ್ಲಿ ಕರೆತಂದು ಗಣತಿದಾರರಿಂದ ಸಮೀಕ್ಷೆ ಕಾರ್ಯ ಮಾಡಿಸಿದ್ದಾರೆ. ಮೇಲ್ವಿಚಾರಕ ಸತೀಶ್ ಮಾರುತಿ ನಾಯ್ಕ್ ಸಾಥ್ ನೀಡಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನ ಸಾಕಷ್ಟು ದುರ್ಗಮ ಪ್ರದೇಶಗಳಿರುವ ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯ ಒಟ್ಟು 11 ವಾರ್ಡ್‌ಗಳ ಪೈಕಿ 1 ಮತ್ತು 11ನೇ ವಾರ್ಡ್‌ಗಳಲ್ಲಿ ನೆಟ್‌ವರ್ಕ್ ಸಿಗುವುದೇ ಇಲ್ಲ. ಸಮೀಕ್ಷೆಗೆ ಜನರು ಆಸಕ್ತಿ ತೋರಿಲ್ಲದ ಕಾರಣ ಮನೆ ಮನೆಯಿಂದ ಜನರನ್ನು ಗುರುತಿಸಿದ ಕೇಂದ್ರಕ್ಕೆ ಕರೆಸಿ ಸಮೀಕ್ಷೆಗೆ ಅಗತ್ಯವಾದ ಮಾಹಿತಿ ಪಡೆಯಲಾಗಿದೆ.

ತಳಕಳಲೆ ಹಿನ್ನೀರ ಪ್ರದೇಶ 11ನೇ ವಾರ್ಡ್ ಪಪಂನಿಂದ 15 ಕಿ.ಮೀ ದೂರದಲ್ಲಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದ್ದರಿಂದ ವೈಫೈ ಸಂಪರ್ಕ ಹೊಂದಿರುವ ಭುಜಬಲಿ, ಗಣೇಶ್ ಹಾಗೂ ಗುಂಡಿಬೈಲು ಫೆಲಿಕ್ಸ್ ಎಂಬುವರ ಮನೆಗಳನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿಗೆ ವಾಹನಗಳಲ್ಲಿ ಜನರನ್ನು ಕರೆತರಲಾಯಿತು. ವಾಹನ ಹೋಗದಿರುವ ಜಾಗಗಳಲ್ಲಿ ಬೈಕ್ ಮೂಲಕವು ಕರೆತಂದು 240 ಕುಟುಂಬಗಳ ಗಣತಿ ಕಾರ್ಯ ಮಾಡಲಾಯಿತು. ವಾರ್ಡ್ ಸಂಖ್ಯೆ ಒಂದರಲ್ಲಿ ಒಟ್ಟು 135 ಕುಟುಂಬಗಳ ಗಣತಿ ಕಾರ್ಯವನ್ನು ಮಳಲಿ ಈಶ್ವರ ದೇವಸ್ಥಾನದ ಬಳಿ ಕೇಂದ್ರವಾಗಿಟ್ಟು ಜಾತಿಗಣತಿ ಕಾರ್ಯ ಪೂರ್ಣ ಮಾಡಲಾಗಿದೆ.

ನೋಡಲ್ ಅಧಿಕಾರಿ ಸುಭಾಷ್, ಲೋಕೇಶ್‌ಮೂರ್ತಿ, ಆಶ್ರಯ ಸಮಿತಿ ಸದಸ್ಯ ಎಚ್.ಎಸ್.ಸಾದಿಕ್, 10 ಬಿಎಲ್ಒಗಳು ಹಾಗೂ ಶಿಕ್ಷಕರ ತಂಡ, ಗಣತಿದಾರರು, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net