

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೊಡಕಾಗಿದ್ದ ಹಿನ್ನೆಲೆಯಲ್ಲಿ ತಾಲೂಕು ಅಡಳಿತ ಇಲ್ಲಿಯ ಜನರನ್ನು ಗ್ರಾಮ ಪಂಚಾಯಿತಿಗೇ ಕರೆದುಕೊಂಡು ಬಂದು ಸಮೀಕ್ಷೆ ಮಾಡುತ್ತಿದ್ದು ಬಹುತೇಕ ಇದು ಪೂರ್ಣಗೊಳ್ಳುವ ಹಂತವನ್ನು ತಲುಪಿದೆ.
ಬುಡಕಟ್ಟು ಸೋಲಿಗರು ವಾಸ ಮಾಡುವ ಕಾಡಿನೊಳಗೆ ಇರುವ ಈ ಪೋಡಿನಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಇಲ್ಲಿ ಒಟ್ಟು 105 ಕುಟುಂಬಗಳು ವಾಸವಾಗಿವೆ. ಇಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗದ ಹಿನ್ನೆಲೆಯಲ್ಲಿ ಇದನ್ನು ಶ್ಯಾಡೋ ಏರಿಯಾ ಎಂದು ಗುರುತಿಸಲಾಗಿತ್ತು. ಇಲ್ಲೇ ಇರುವ ದೊಡ್ಡ ಗುಡ್ಡವಾಗಿರುವ ಸಿದ್ಧನಗುಡ್ಡದಲ್ಲಿ ನೆಟ್‌ವರ್ಕ್ ಸಿಗುವ ನಿರೀಕ್ಷೆ ಇತ್ತು. ಆದರೆ ಇಲ್ಲೂ ಸಿಗದ ಕಾರಣ ಭಾನುವಾರದಿಂದ ಇವರನ್ನು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಜೀಪ್‌ಗಳಲ್ಲಿ ಇವರನ್ನು ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಕಚೇರಿಗೆ ಕರೆತಂದು ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಸಮೀಕ್ಷೆ ಪ್ರಗತಿಯಲ್ಲಿದ್ದು ಸೋಮವಾರ ಸಂಜೆ ವೇಳೆಗೆ ಇನ್ನು 20 ಮನೆಗಳು ಮಾತ್ರ ಬಾಕಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.