ಎರಡು ತಿಂಗಳಲ್ಲಿ ಕೆರೆಗಳ ಸರ್ವೇ ಪೂರ್ಣ: ಸಿಎಂ ಸಿದ್ದರಾಮಯ್ಯ ಸೂಚನೆ | Indiscriminate eviction

Tanks meeting
Published on

ಬೆಂಗಳೂರು: ರಾಜ್ಯದಲ್ಲಿ ವಿವಿಧ ಇಲಾಖೆಗಳ ಒಟ್ಟು 41,875 ಕೆರೆಗಳ ಪೈಕಿ 10,710 ಕೆರೆಗಳ ಮಾಪನ (ಸರ್ವೇ) ಬಾಕಿಯಿದ್ದು, ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಭಿವೃದ್ಧಿ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮಂಗಳವಾರ ನಡೆದ ಕರ್ನಾಟಕ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು ಇಲಾಖಾವಾರು ಕೆರೆಗಳ ಸರ್ವೇ, ಒತ್ತುವರಿ ತೆರವು ಹಾಗೂ ತೆರವಿಗೆ ಬಾಕಿಯಿರುವ ಕೆರೆಗಳ ಮಾಹಿತಿ ಪಡೆದರು. ಖಾಸಗಿಯವರು ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಬೇಕು ಎಂದ ಖಡಕ್ ಆಗಿ ತಾಕೀತು ಮಾಡಿದರು.

ವಿವಿಧ ಇಲಾಖೆಗಳ 11,212 ಕೆರೆಗಳ ಒತ್ತುವರಿ ಗುರುತಿಸಿ, 5967 ಒತ್ತುವರಿ ತೆರವುಗೊಳಿಸಿದ್ದು, 5245 ಕೆರೆಗಳ ಒತ್ತುವರಿ ತೆರವು ಬಾಕಿಯಿದೆ. ಸಣ್ಣ ನೀರಾವರಿ ಇಲಾಖೆಯ 3778 ಕೆರೆಗಳ ಪೈಕಿ 166 ಕೆರೆಗಳ ಒತ್ತುವರಿ ತೆರವು ಬಾಕಿಯಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿವೆ. ಇದರಲ್ಲಿ ಅಳತೆಯಾದ 167 ಕೆರೆಗಳ ಪೈಕಿ 96 ಕೆರೆಗಳ ಒತ್ತುವರಿ ತೆರವು ಬಾಕಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಫರ್ ಜೋನ್ ನಿಗದಿಗೆ ಸಮಿತಿ

ಸುಪ್ರೀಂ ಕೋರ್ಟ್ ಆದೇಶದಂತೆ ಕೆರೆಗಳ ಸುತ್ತ ಬಫರ್ ಜೋನ್ ಅನ್ನು ನಿಗದಿಪಡಿಸಲು ತಾಂತ್ರಿಕ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ, ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆ ಗಳಿಂದ ಆದಾಯ ಗಳಿಸಲು ಸಾಧ್ಯವಾಗುವಂತೆ ಆನ್‌ಲೈನ್‌ನಲ್ಲಿ ಟೆಂಡರ್ ಕರೆಯಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೆರೆಗಳು ಮಲಿನವಾಗದಂತೆತಡೆಯಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕಾರ್ಯ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಉದ್ದೇಶಕ್ಕೆ ರಚಿತ ಸಂಘಗಳು ನಿಯಮದ ಪ್ರಕಾರ ವಾರ್ಷಿಕ ಲೆಕ್ಕಪರಿಶೋಧನೆ, ಮೂರು ವರ್ಷಗಳಿಗೊಮ್ಮೆ ನವೀಕರಣ ಮಾಡದ ಕಾರಣ ಬಹುತೇಕವು ನಿಷ್ಕ್ರಿಯವಾಗಿವೆ. ಈ ಪೈಕಿ ಕ್ರಿಯಾಶೀಲ ಸಂಘಗಳನ್ನು ಮುಂದುವರಿಸಿ, ಉಳಿದವುಗಳನ್ನು ಗ್ರಾಮ ಸಭೆಗಳ ಮೂಲಕ ರಚಿಸಬೇಕು ಎಂದರು.

ಪ್ರಾಧಿಕಾರದ 115 ಸಿಬ್ಬಂದಿ ಗುತ್ತಿಗೆಯಡಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ, ಮಂಜೂರಾದ 50 ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು ಎಂಬ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net