ಪ್ರಗತಿಯಲ್ಲಿದೆ 9,129 ಎಕರೆ ಸರ್ವೇ: ಸಂಸದ

byr
ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಶರಾವತಿ ಸಂತ್ರಸ್ತರಿಗೆ ಭೂಮಿ ಹಂಚಿಕೆ ಸಂಬಂಧ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂತ್ರಸ್ತರ ಸಭೆ ನಡೆಯಿತು. ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಶಾರದಾ ಪೂರ‌್ಯಾನಾಯ್ಕಾ, ಕೆ.ಬಿ.ಅಶೋಕ ನಾಯ್ಕ, ಗುರುದತ್ತ ಹೆಗಡೆ ಮುಂತಾದವರಿದ್ದರು.
Published on

ಶಿವಮೊಗ್ಗ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಪ್ರಯತ್ನ ಮುಂದುವರಿದಿದ್ದು, ಸಮಸ್ಯೆಯ ಪ್ರಾಯೋಗಿಕ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ರೈತರು ಸಹಕರಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಂತ್ರಸ್ತರೊಂದಿಗೆ ಸಭೆ ನಡೆಸಿದ ಅವರು, ಅರಣ್ಯ ಮತ್ತು ಕಂದಾಯ ಇಲಾಖೆಯಿಂದ 9,129 ಎಕರೆ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಈ ವಿಷಯದಲ್ಲಿ ರೈತರು ಹಾಗೂ ಅಧಿಕಾರಿಗಳಲ್ಲಿ ಅನೇಕ ಗೊಂದಲಗಳಿವೆ. ಗುರುತಿಸಿರುವುದಕ್ಕಿಂತ ಹೆಚ್ಚಿನ ಭೂಮಿ ರೈತರ ಅನುಭೋಗದಲ್ಲಿದೆ. ಈ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.

ರಾಜ್ಯ ಮತ್ತು ಕೇಂದ್ರದ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಜಿಲ್ಲಾಧಿಕಾರಿ, ಸಿಸಿಎಫ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ನಿಟ್ಟಿನಲ್ಲಿ ಎಫ್‌ಎಸ್‌ಒ ನೇಮಕ ಮಾಡಿ ನೈಜ ಸಂತ್ರಸ್ತರನ್ನು ಗುರುತಿಸಬೇಕು ಎಂದರು.

ಸಂತ್ರಸ್ತ ತಿಮ್ಮಪ್ಪ ಮಾತನಾಡಿ, ಈ ಹಿಂದೆ ಕಳುಹಿಸಲಾಗಿದ್ದ ಸುಮಾರು ಆರು ಸಾವಿರ ಎಕರೆ ಬ್ಲಾಕ್ ವಿವರ ಸಂಪೂರ್ಣ ತಪ್ಪಾಗಿತ್ತು. ಅದನ್ನೇ ಮುಂದುವರಿಸಿಕೊಂಡು ಹೋದರೆ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ. ಆದ್ದರಿಂದ ಹೊಸದಾಗಿ ಸರ್ವೇ ಮಾಡಿ ಬ್ಲಾಕ್ ಸಿದ್ಧಪಡಿಸಿದರೆ ಒಳಿತು. ಸರ್ವೇ ನಂತರ ಗೊಂದಲ ಹೆಚ್ಚಾಗಿದ್ದು ಸರ್ವೇ ನಂಬರ್‌ಗಳು ಬದಲಾಗಿ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ತೋರಿಸಲಾಗುತ್ತಿದೆ ಎಂದು ಗಮನಕ್ಕೆ ತಂದರು.

ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net