

ಶಿಕಾರಿಪುರ: ತಾಲೂಕಿನ ನೆಲವಾಗಲು ಗ್ರಾಮದಲ್ಲಿ ಉದ್ದೇಶಿತ 220 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಗ್ರಾಮದ ಸರ್ವೇ ನಂ.25ರಲ್ಲಿ ಶುಕ್ರವಾರ ಕೆಪಿಟಿಸಿಎಲ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರ ಪ್ರತಿಭಟನೆಯ ನಡುವೆಯೇ ಸರ್ವೇ ಕಾರ್ಯ ನಡೆಸಿದರು.
ರೈತರು ವಿರೋಧ ಮಾಡಬಹುದೆಂಬ ಮುಂಜಾಗ್ರತೆಯಿಂದ ಪೊಲೀಸ್ ರಕ್ಷಣೆ ಪಡೆಯಲಾಗಿತ್ತು. ಸರ್ವೇ ನಡೆಯುವ ಸ್ಥಳದ ಸುತ್ತ ನಿಷೇಧಾಜ್ಞೆ ವಿಧಿಸಿ ಸರ್ವೇ ಮಾಡಲಾಯಿತು. 144 ಸೆಕ್ಷನ್ ಜಾರಿಯಿದ್ದ ಕಾರಣ ಸರ್ವೇ ಸ್ಥಳಕ್ಕೆ ಬರಲಿಲ್ಲ ಮತ್ತು ಅಡ್ಡಿಪಡಿಸಲಿಲ್ಲ. ದೂರದಿಂದಲೇ ಸುಮಾರು ನೂರಕ್ಕೂ ಹೆಚ್ಚು ರೈತರು, ಗ್ರಾಮಸ್ಥರು ಚುನಾಯಿತ ಪ್ರತಿನಿಧಿಗಳಿಗೆ, ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಅವರಿಗೆ ಧಿಕ್ಕಾರ ಕೂಗಿದರು.
ಗ್ರಿಡ್ ನಿರ್ಮಾಣಕ್ಕೆ ಕೆಪಿಟಿಸಿಎಲ್ ಗುರುತಿಸಿರುವ ಜಾಗದ ಹತ್ತಿರ ಶಾಲೆಯಿದೆ. ನಿವೇಶನ ರಹಿತರಿಗೆ ನಿವೇಶನ ಹಂಚಲಾಗಿದೆ. ಮುಖ್ಯವಾಗಿ ಇದು ನಮ್ಮೂರಿನ ಹಳೆಯ ಸ್ಮಶಾನದ ಜಾಗ. ಗ್ರಿಡ್ ನಿರ್ಮಿಸಲು ಇಡೀ ಊರಿನ ಜನರ ವಿರೋಧವಿದೆ. ವಿರೋಧದ ನಡುವೆ ಗ್ರಿಡ್ ನಿರ್ಮಾಣಕ್ಕೆ ಸರ್ವೇ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆಲವಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಮಾತನಾಡಿ, ನೆಲವಾಗಿಲು ಗ್ರಾಮ ಪ್ರತಿವರ್ಷ ಬೆಳೆಯುತ್ತಿದೆ. ಇಲ್ಲಿ ಸಾಕಷ್ಟು ಹೈನುಗಾರಿಕೆ ನಡೆಯುತ್ತಿದ್ದು, ಹಸುಗಳ ಸಂಖ್ಯೆ ಜಾಸ್ತಿಯಿದೆ. ಈಗ 220 ಕೆವಿ ಗ್ರಿಡ್ ನಿರ್ಮಿಸುವ ಜಾಗ ಗೋಮಾಳದ್ದು. ಮುಂದೆ ಹಸುಗಳು ಮೇಯಲು ಜಾಗವೇ ಇರುವದಿಲ್ಲ. ತಕ್ಷಣ ಗ್ರಿಡ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಪವರ್ ಗ್ರಿಡ್ ನಾಲ್ಕು ವರ್ಷಗಳ ಹಿಂದೆಯೇ ಮಂಜೂರಾಗಿದೆ. ಇದರಿಂದ ನೆಲವಾಗಿಲು ಸೇರಿ ಸುತ್ತಲಿನ ಹಳ್ಳಿಗಳಿಗೆ ಅನುಕೂಲವಾಗಲಿದೆ. ಜಿಲ್ಲಾಧಿಕಾರಿ ಆದೇಶದಂತೆ ಹತ್ತು ಎಕರೆ ಗೋಮಾಳದ ಜಮೀನನ್ನು ಕೆಪಿಟಿಸಿಎಲ್ ಸುಪರ್ದಿಗೆ ವಹಿಸಲಾಗಿದೆ. ಸ್ಮಶಾನಕ್ಕೆ 6 ಎಕರೆ, ಆಶ್ರಯಕ್ಕೆ 17 ಎಕರೆ ನೀಡಿದ್ದು, 14 ಎಕರೆ ಇನ್ನೂ ಉಳಿದಿದೆ. ಡಿಸಿ ಆದೇಶದಂತೆ ಕೆಪಿಟಿಸಿಎಲ್ ಸ್ವಾಧೀನಕ್ಕೆ ನೀಡುತ್ತಿದ್ದೇವೆ ಎಂದು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ವೀರೇಶ್, ಸದಸ್ಯರಾದ ಶಿವಾಜಿ, ಬಸವರಾಜ್, ರೇಖಾ ಶಿವಕುಮಾರ, ಕಾವೇರಿ ಗಿರೀಶ್, ಮುಖಂಡ ಈಸೂರು ಸಂತೋಷ್, ಲಿಂಗರಾಜ್ ಗೌಡ ಇತರರಿದ್ದರು.