

ವಿಜಯವಾಣಿ ವಿಶೇಷ ಯಲಬುರ್ಗಾ
ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಷನ್ (ಮುಂಗಾರು ರೈತರ ಬೆಳೆ ಸಮೀಕ್ಷೆ ಆ್ಯಪ್) ಬಳಸಿ ಸರ್ವೇ ನಂಬರ್‌ವಾರು ಬೆಳೆ ಪ್ರದೇಶದ ನಿಖರ ಮಾಹಿತಿ ದಾಖಲಿಸುವ ಕಾರ್ಯ ತಾಲೂಕಿನಲ್ಲಿ ಕಂದಾಯ-ಕೃಷಿ ಇಲಾಖೆಯಿಂದ ನಡೆದಿದ್ದು, ಈಗಾಗಲೇ ಶೇ.43 ಸಾಧನೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು ಸರ್ಕಾರವು ಮುಂಗಾರು ರೈತರ ಬೆಳೆ ಸಮೀಕ್ಷೆ ಆ್ಯಪ್ ಅಭಿವೃದ್ಧಿಪಡಿಸಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ರೈತಸ್ನೇಹಿ ಕಾರ್ಯಕ್ರಮ ಇದಾಗಿದೆ. ಇದರ ಮೂಲಕ ರೇಷ್ಮೆ, ಕೃಷಿ, ತೋಟಗಾರಿಕೆ ಬೆಳೆಗಳ ದಾಖಲೆ ಮಾಡಬಹುದಾಗಿದೆ. ಯಲಬುರ್ಗಾ-ಕುಕನೂರು ತಾಲೂಕಿನ 1.09 ಲಕ್ಷ ಪ್ಲಾಟ್ (ತಾಕುಗಳಲ್ಲಿ)ಗಳಲ್ಲಿ ಈಗಾಗಲೇ 46 ಸಾವಿರ ತಾಕುಗಳು ಪೂರ್ಣಗೊಂಡಿವೆ. ಶೇ.43 ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ಮೊಬೈಲ್ ಇಲ್ಲದವರು, ಇದ್ದೂ ಬಳಕೆ ಮಾಡಲು ಬಾರದವರು ಬೆಳೆ ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸರ್ಕಾರದ ನಿರ್ದೇಶನದಂತೆ ಕೃಷಿ, ಕಂದಾಯ ಇಲಾಖೆಯಿಂದ ಅಂದಾಜು 1000 ಸರ್ವೇ ನಂಬರ್‌ಗೆ ಒಬ್ಬರಂತೆ ತಂತ್ರಾಂಶ ಜ್ಞಾನವುಳ್ಳ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು 2024-25ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಒಂದು ಪ್ಲಾಟ್ ಸಮೀಕ್ಷೆ ನಡೆಸಿದರೆ 10 ರೂ. ಗೌರವಧನ ಇದೆ.
ಸ್ಥಳೀಯ ಯುವಕರ (ಖಾಸಗಿ ವ್ಯಕ್ತಿಗಳು) ಸೇವೆಯನ್ನು ಬಳಸಿಕೊಳ್ಳುವುದರ ಮೂಲಕ ತಾತ್ಕಾಲಿಕ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಸರ್ವೇ ನಂಬರ್‌ಗಳ ಪ್ರಕಾರ ಜಮೀನುಗಳಿಗೆ ಬಂದು ಖಾಸಗಿ ವ್ಯಕ್ತಿಗಳು ಬೆಳೆಗಳ ಸರ್ವೇ ಕೈಗೊಳ್ಳುವಾಗ ರೈತರು ಆ ವೇಳೆಯಲ್ಲಿ ಇದ್ದು, ಬೆಳೆ ಸಮೀಕ್ಷೆ ದಾಖಲೀಕರಣ ಖಾತ್ರಿಪಡಿಸಿಕೊಳ್ಳಬಹುದು.
ಮೊಬೈಲ್ ಆಪ್ ಮೂಲಕ ಮುಂಗಾರಿನ ವಿವಿಧ ಬೆಳೆಗಳ ಸಮೀಕ್ಷೆ ಮಾಡುವುದರಿಂದ ಈ ಮಾಹಿತಿಯನ್ನು ಬೆಳೆಸಾಲ, ಬೆಳೆವಿಮೆ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಅನುಕೂಲವಾಗಿದೆ.
ಕ್ಷೇತ್ರದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಮುಂಗಾರು ಬೆಳೆ ಸಮೀಕ್ಷೆ ಕಾರ್ಯ ನಡೆದಿದೆ. ದಿನಾಲೂ ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲಿಸಲಾಗುತ್ತಿದೆ. ಸಮೀಕ್ಷೆ ಕೈಗೊಳ್ಳಲು ರೈತರ ಜಮೀನಿಗೆ ಆಗಮಿಸುವ ಖಾಸಗಿ ವ್ಯಕ್ತಿಗಳಿಗೆ ಸಹಕಾರ ನೀಡುವ ಮೂಲಕ ಬೆಳೆ ನಮೂದೀಕರಣ ಖಾತ್ರಿಪಡಿಸಿಕೊಳ್ಳಬಹುದು.| ಬಸವರಾಜ ತೆನ್ನಳ್ಳಿ, ತಹಸೀಲ್ದಾರ್ ಯಲಬುರ್ಗಾ ಬೆಳೆ ಸಮೀಕ್ಷೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಯೋಜನೆ, ಪಹಣಿ ಪತ್ರಿಕೆಗಳಲ್ಲಿ ಬೆಳೆ ಹೆಸರು ನಮೂದಿಸಲು ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಮಾಹಿತಿ ಅವಶ್ಯವಾಗಿದೆ. ರೈತರು ತಮ್ಮ ಹೊಲದಲ್ಲಿನ ಬೆಳೆಯನ್ನು ತಾವೇ ನಮೂದಿಸಬಹುದು. ಅಥವಾ ತಮ್ಮ ಗ್ರಾಮಕ್ಕೆ ನಿಯೋಜಿಸಿದ ಖಾಸಗಿ ವ್ಯಕ್ತಿಗಳಿಂದ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಬಹುದು.| ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ