

ಸಾಮಾನ್ಯವಾಗಿ ಇಂಗ್ಲಿಷ್ ಚಿತ್ರಗಳಲ್ಲಿ ಭಾರೀ ಆಕಾರದ ಬಾವಲಿಗಳನ್ನು ನೋಡಿರುತ್ತೇವೆ. ಆದರೆ ಅವು ನಿಜವಾಗಿ ಎದುರಾದರೆ ಅಚ್ಚರಿ ಉಂಟಾಗುವುದಲ್ಲವೇ? ಇತ್ತೀಚೆಗೆ ಫಿಲಿಪ್ಪೀನ್ಸ್ನ ಅಲೆಕ್ಸ್ ಎನ್ನುವವರು ಮನೆಯ ಮುಂದಿನ ತಗಡಿಗೆ ನೇತಾಡುತ್ತಿದ್ದ ಭಾರೀ ಗಾತ್ರದ ಬಾವಲಿಯ ಚಿತ್ರವನ್ನು ಟ್ವೀಟ್ ಮಾಡಿದ್ದರು.
‘ಫಿಲಿಪ್ಪೀನ್ಸ್ನಲ್ಲಿ ಆಗಾಗ ಮನುಷ್ಯಗಾತ್ರದ ಬಾವಲಿಯೊಂದು ಕಾಣಿಸಿಕೊಳ್ಳುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ’ ಎಂದು ಕೂಡ ಟಿಪ್ಪಣಿ ಬರೆದಿದ್ದರು. ಈ ಚಿತ್ರವನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದು, ಸಹಸ್ರಾರು ಜನ ರೀಟ್ವೀಟ್ ಮಾಡಿದ್ದಾರೆ. ಕೆಲವರು ಇದು ನಿಜವಾದದ್ದೋ ಅಲ್ಲವೋ ಎಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.