

ಮುಂಬೈ: ಕರೊನಾ ವೈರಸ್ ಎಷ್ಟೋ ಮಂದಿಯ ವೈಯಕ್ತಿಕ ಜೀವನದಲ್ಲಿ ಅನೇಕ ರೀತಿಯಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿಬಿಟ್ಟಿದೆ. ಅಗತ್ಯ ವಸ್ತುಗಳು ಜನರಿಗೆ ಸುಲಭದಲ್ಲಿ ಸಿಗುವಂತೆ ಸರ್ಕಾರಗಳು ಅನುಕೂಲ ಕಲ್ಪಿಸಿದ್ದರೂ, ಆರೋಗ್ಯ ಸಮಸ್ಯೆಯ ವಿಷಯ ಬಂದಾಗ, ಯಾರ್ಯಾರ ಅಗತ್ಯ ಹೇಗಿರುತ್ತದೆಯೋ ಎಂದು ಊಹಿಸುವುದೇ ಕಷ್ಟ.
ಅದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದವರು ಮುಂಬೈನ ನೇಹಾ ಕುಮಾರಿ. ಇವರ ಮಗ ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಆತನಿಗೆ ಒಂಟೆ ಹಾಲಿನ ಅಗತ್ಯವಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅವರಿಗೆ ಎಷ್ಟರಮಟ್ಟಿಗೆ ಸಮಸ್ಯೆಯಾಯಿತು ಎಂದರೆ ಒಂಟೆ ಹಾಲು ಎಲ್ಲಿಯೂ ಸಿಗಲೇ ಇಲ್ಲ. ಸಾಲದು ಎನ್ನುವುದಕ್ಕೆ ಅವರಿಗೆ ಈ ಹಾಲು ಎಲ್ಲಿ ಸಿಗುತ್ತದೆ ಎನ್ನುವ ಮಾಹಿತಿಯೂ ಇರಲಿಲ್ಲ. ಹಸು, ಮೇಕೆ, ಎಮ್ಮೆಯ ಹಾಲು ಯಾವುದನ್ನೂ ಕುಡಿದರೆ ಅವರ ಮಗನಿಗೆ ಅಲರ್ಜಿ ಆಗುವ ಕಾರಣ, ಒಂಟೆಯ ಹಾಲು ತುರ್ತಾಗಿ ಅವರಿಗೆ ಅವಶ್ಯಕತೆ ಇತ್ತು.
ಏನು ಮಾಡುವುದು ಎಂದು ತೋಚದೇ ನೇಹಾ ಅವರು ತಮ್ಮ ಸಮಸ್ಯೆಯನ್ನು ಟ್ವೀಟ್ ಮೂಲಕ ಹೇಳಿಕೊಂಡು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದರು. ತಮಗೆ ತುರ್ತಾಗಿ 20 ಲೀಟರ್ ಒಂಟೆಯ ಹಾಲು ಬೇಕು ಎಂದು ಅವರು ಕೋರಿಕೊಂಡರು. ಆದರೆ ಅವರಿಗೆ ಒಂಟೆಯ ಹಾಲು ಎಲ್ಲಿ ಸಿಗುತ್ತದೆ ಎಂಬ ಬಗ್ಗೆಯೂ ಕಲ್ಪನೆ ಇಲ್ಲ ಎಂಬ ಬಗ್ಗೆಯೂ ಹೇಳಿದರು. ಇಂಥ ಗಂಭೀರ ಸಮಯದಲ್ಲಿ ತಮ್ಮ ಟ್ವೀಟ್‌ಗೆ ಪ್ರತಿಕ್ರಿಯೆ ಬರುವ ಆತಂಕವೂ ಅವರಲ್ಲಿತ್ತು.
ಆದರೆ ಖುದ್ದು ನೇಹಾ ಅವರೂ ಊಹಿಸದ ಅಚ್ಚರಿ ನಡೆದೇ ಹೋಗಿತ್ತು.ಅವರಿಗೆ, ಒಂಟೆ ಹಾಲು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಸಿಕ್ಕಿದ್ದೂ ಮಾತ್ರವಲ್ಲದೇ, ಇಂಥ ವಿಷಮ ಸ್ಥಿತಿಯಲ್ಲಿಯೂ ಮನೆಯ ಬಾಗಿಲಿಗೆ ಹಾಲು ಬಂದುಬಿಟ್ಟಿತ್ತು!
ಅದು ನಡೆದದ್ದು ಹೀಗೆ. ನೇಹಾ ಅವರ ಟ್ವೀಟ್‌ಗೆ ಅನೇಕ ಮಂದಿ ಪ್ರತಿಕ್ರಿಯಿಸಿ ಒಂಟೆ ಹಾಲು ಎಲ್ಲಿ ಸಿಗುತ್ತದೆ ಎನ್ನುವ ಸಲಹೆಗಳನ್ನು ನೀಡಿದ್ದರು. ಈ ಟ್ವೀಟ್ ನೋಡಿದ್ದ ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ರಾಜಸ್ಥಾನದಲ್ಲಿ ಈ ಹಾಲು ಸಿಗುವ ಬಗ್ಗೆ ಪ್ರತಿಕ್ರಿಯಿಸಿದ್ದರು. ನಂತರ ಖುದ್ದು ಇವರು ಒಂಟೆ ಹಾಲು ಮಾರಾಟ ಮಾರುವ ರಾಜಸ್ಥಾನದ ಅದ್ವಿಕ್ ಫುಡ್ಸ್ ಸಂಪರ್ಕಿಸಿದ್ದರು. ಅವರು ಒಂಟೆ ಹಾಲಿನ ಪುಡಿ ಕೊಡಲು ಸಿದ್ಧರಾಗಿದ್ದರೂ ಅದನ್ನು ಮುಂಬೈನಲ್ಲಿರುವ ಮಹಿಳೆಗೆ ತಲುಪಿಸುವುದು ಸಮಸ್ಯೆ ಆಗಿತ್ತು.
ಇದರ ಬಗ್ಗೆ ಅರುಣ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದರು. ಇದನ್ನು ಗಮನಿಸಿದ ರೇಲ್ವೆ ಇಲಾಖೆಯ ಅಧಿಕಾರಿ ತರುಣ್ ಜೈನ್, ಹಾಲು ತಲುಪಿಸಲು ತಮ್ಮ ಇಲಾಖೆಯಿಂದ ಯಾವುದಾದರೂ ರೀತಿಯಲ್ಲಿ ಸಹಾಯ ಆಗಬಹುದು ಎಂಬ ಬಗ್ಗೆ ತಮ್ಮ ಉನ್ನತಾಧಿಕಾರಿಗಳ ಜತೆ ಚರ್ಚಿಸಿದರು.
ರಾಜಸ್ಥಾನದ ಫಲ್ನಾ ರೈಲ್ವೆ ನಿಲ್ದಾಣದಿಂದ ಒಂಟೆ ಹಾಲನ್ನು ತರಲು ಅನುಮತಿಯನ್ನೂ ಪಡೆದುಕೊಂಡರು. ರೈಲು ಫಲ್ನಾದಲ್ಲಿ ನಿಲುಗಡೆ ಇಲ್ಲದಿದ್ದರೂ ಅಲ್ಲಿ ನಿಲ್ಲಿಸಿ, ಒಂಟೆ ಹಾಲನ್ನು ಪಡೆದು, ಅದನ್ನು ನೇಹಾ ಕುಮಾರಿ ಅವರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ.
ಯಾವುದೇ ಜನರಿಗೂ ಸಮಸ್ಯೆ ಆಗಬಾರದು. ಇಂಥ ಸ್ಥಿತಿಯಲ್ಲಿ ಯಾರಿಗೆ ಬೇಕಾದರೂ ಸಹಾಯ ಮಾಡಲು ನಾವು ಸಿದ್ಧ. ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತೇವೆ ಎಂದಿದ್ದಾರೆ ಅರುಣ್ ಬೋಥ್ರಾ. ರೈಲ್ವೆ ಇಲಾಖೆಯ ಈ ನೆರವಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ನೇಹಾ ಅವರ ಸಂತಸಕ್ಕೂ ಪಾರವೇ ಇಲ್ಲವಾಗಿದೆ. (ಏಜನ್ಸೀಸ್)