

ಬೆಂಗಳೂರು: ಕಾಂಗ್ರೆಸ್ ಶಾಸಕರ ಅಹವಾಲು ಕೇಳಲು ಮತ್ತು ಪಕ್ಷ ಸಂಘಟನೆ ಸಲುವಾಗಿ 2ನೇ ಒನ್ ಟು ಒನ್ ಸಭೆ ನಡೆಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಭಾನುವಾರ ರಾತ್ರಿ ಬಂದಿಳಿದಿರುವ ಸುರ್ಜೇವಾಲಾ, ಸೋಮವಾರ ಬೆಳಗ್ಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಈ ಭಾರಿ ಉತ್ತರ ಕರ್ನಾಟಕ ಭಾಗದ 63 ಶಾಸಕರೊಂದಿಗೆ ಸಭೆ ನಿಗದಿಯಾಗಿದೆ. ಪ್ರತಿಯೊಬ್ಬರಿಗೂ 20 ನಿಮಿಷ ನಿಗದಿ ಮಾಡಲಾಗಿದೆ. ಮೂರು ದಿನ ನಗರದಲ್ಲಿ ಉಳಿದುಕೊಳ್ಳುವ ಸರ್ಜೇವಾಲಾ, ಸಚಿವರು ಮತ್ತು ಜಿಲ್ಲಾ ಉಸ್ತುವಾರಿಗಳ ಕಾರ್ಯವೈಖರಿ, ಸಮಸ್ಯೆಗೆ ಸ್ಪಂದನೆ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಕಳೆದ 2 ವರ್ಷದಲ್ಲಿ ಕ್ಷೇತ್ರದಲ್ಲಿ ಯಾವ ಯಾವ ಯೋಜನೆ ಅನುಷ್ಠಾನ ಮಾಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ, ಪಕ್ಷ ಸಂಘಟನೆಯಲ್ಲಿ ಶಾಸಕರು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಪಡೆದು ಸಲಹೆ-ಸೂಚನೆ ನೀಡಲಿದ್ದಾರೆ. ಈಗಾಗಲೇ ಮೊದಲ ಸುತ್ತಿನಲ್ಲಿ ಬೆಂಗಳೂರು ನಗರ ಮತ್ತು ಹಳೇ ಮೈಸೂರು ಭಾಗದ 45 ಶಾಸಕರನ್ನು ಕರೆದು ದುಃಖ ದುಮ್ಮಾನ ಆಲಿಸಿದ್ದಾರೆ. ಜುಲೈ 9ರಂದು ವಾಪಸ್ ದೆಹಲಿಗೆ ಹೋಗಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ಮಾಹಿತಿ ನೀಡಿವೆ.
ಉಸ್ತುವಾರಿ ಭೇಟಿ ಮಾಡಲಿರುವ ಪರಂ:
ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ. ಪಕ್ಷದ ಯೋಗಕ್ಷೇಮ ವಿಚಾರಿಸಲು ಬರುತ್ತಾರೆ. ಅವರಿಗೆ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಲಿದ್ದಾರೆ. ನಿಗಮ ಮಂಡಳಿ ನೇಮಕಾತಿ ವಿಚಾರ ಚರ್ಚೆ ನಡೆಯುತ್ತಿದೆ. 224 ಕ್ಷೇತ್ರಗಳ ಪಟ್ಟಿ ಸಿದ್ದವಾಗಿದೆ. ಇನ್ನು ಸರ್ಜೇವಾಲಾ ಅವರನ್ನು ನಾನು ಭೇಟಿ ಮಾಡಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.