ಡಿಸಿ ನಡೆಗೆ ಆಗಲಿದೆ ಸರ್ಜರಿ ಜನಸ್ನೇಹಿ ಕಾರ್ಯಕ್ರಮ ರೂಪಿಸಲು ಜಿಲ್ಲಾಡಳಿತ ಚಿಂತನೆ

vbnvbn
Published on

|ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದಂತೆ ಉತ್ತೇಜಿತವಾಗಿರುವ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಕೆಲವೊಂದು ಮಾರ್ಪಾಡಿನೊಂದಿಗೆ ಮತ್ತಷ್ಟು ಜನಸ್ನೇಹಿಯಾಗಿಸಲು ಚಿಂತಿಸಿದೆ. ಮುಖ್ಯವಾಗಿ ಕಾಲಹರಣಕ್ಕೆ ಕತ್ತರಿ ಹಾಕಿ ಸರ್ಕಾರಿ ಸವಲತ್ತುಗಳನ್ನು ಗರಿಷ್ಠ ಜನರಿಗೆ ತಲುಪಿಸುವುದು ಉದ್ದೇಶವಾಗಿದೆ.

ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಇದರಿಂದ ಜನರಿಗೆ ಅನುಕೂಲವಾಗುತ್ತಿರುವುದು ಸರಿ, ಆದರೆ ಕಾರ್ಯಕ್ರಮದ ಪೂರ್ಣ ಪ್ರಯೋಜನ ಸಿಗುತ್ತಿಲ್ಲ ಎಂಬ ಕೊರತೆ ಡಿಸಿ ನಡೆಯ ವೇಗಕ್ಕೆ ತಡೆಯಾಗುತ್ತಿದೆ. ಕೆಲವೊಂದು ಅನವಶ್ಯಕ ಕಾರ್ಯಕ್ರಮಗಳಿಂದಾಗುತ್ತಿರುವ ಕಾಲಹರಣ ಸರಿದೂಗಿಸಿದರೆ ಕಾರ್ಯಕ್ರಮ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂಬುದು ಜಿಲ್ಲಾಡಳಿತದ ಚಿಂತನೆಯಾಗಿದೆ.

ಅಹವಾಲು ಸ್ವೀಕಾರಕ್ಕೆ ಸಿಗ್ತಿಲ್ಲ ಸಮಯ: ಕಾರ್ಯಕ್ರಮ ಸಾಮಾನ್ಯವಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ಆರಂಭವಾದರೆ ರಾತ್ರಿ 10 ರವರೆಗೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ರಾತ್ರಿ ಗ್ರಾಮದಲ್ಲೇ ವಾಸ್ತವ್ಯ ಮಾಡಿ ಮುಂಜಾನೆ 10 ಗಂಟೆವರೆಗೆ ಮುಂದುವರಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಇದಕ್ಕೂ ಮೊದಲು ನಡೆಯುವ ಎತ್ತಿನಗಾಡಿ ಮೆರವಣಿಗೆ, ಜಾನಪದ ಕಲಾತಂಡಗಳ ಪ್ರದರ್ಶನ, ವಿವಿಧ ಇಲಾಖೆಗಳ ಸ್ಟಾಲ್ ಉದ್ಘಾಟನೆ, ಇದರ ಜತೆಗೆ ನಡೆಯುವ ವೇದಿಕೆ ಕಾರ್ಯ ಕ್ರಮಗಳು ಕಾರ್ಯಕ್ರಮದ ಬಹುಪಾಲು ಸಮಯವನ್ನು ನುಂಗಿಹಾಕುತ್ತಿದೆ, ಮುಖ್ಯವಾಗಿ ಅಹವಾಲು ಸ್ವೀಕಾರ ಹಾಗೂ ಸಮಸ್ಯೆಗಳ ಪ್ರತ್ಯಕ್ಷ ದರ್ಶನಕ್ಕೆ ಸಮಯ ಸಿಗದಂತಾಗುತ್ತಿದೆ. ಆದ್ದರಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲವೊಂದಕ್ಕೆ ಬ್ರೇಕ್ ಹಾಕಲು ಯೋಜನೆ ರೂಪಿಸಲಾಗುತ್ತಿದೆ.

ಗ್ರಾಮದ ಬದಲು ಗ್ರಾಪಂ: ಆರಂಭದಲ್ಲಿ ಕಾರ್ಯಕ್ರಮ ಗ್ರಾಮವೊಂದಕ್ಕೆ ಸೀಮಿತವಾಗಿತ್ತು. ಆದರೆ ಗ್ರಾಮವೊಂದಕ್ಕೆ ಸೀಮಿತವಾಗುವುದು ಬೇಡ ಎಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಷ್ಟೂ ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಸಮಯಾವಕಾಶ ಹೊಂದಿಸಲು ಕೆಲವೊಂದು ಕಾರ್ಯಕ್ರಮಕ್ಕೆ ಕತ್ತರಿ ಪ್ರಯೋಗ ನಡೆಯಲಿದೆ.

ಅಧಿಕಾರಿಗಳಿಗೆ ಟಾರ್ಗೆಟ್: ಪ್ರತಿ ತಿಂಗಳ 3ನೇ ಶನಿವಾರ ಕಾರ್ಯಕ್ರಮ ನಿಗದಿಯಾಗುವುದರಿಂದ ಸಾಕಷ್ಟು ಸಮಯಾವಕಾಶ ಇರುತ್ತದೆ, ಆದ್ದರಿಂದ ಮಂದಿನ ಕಾರ್ಯಕ್ರಮ ನಿಗದಿಯಾಗುವ ಗ್ರಾಮಗಳಲ್ಲಿನ ಅಷ್ಟೂ ಫಲಾನುಭವಿಗಳ ಪಟ್ಟಿ ತಯಾರಿಸಬೇಕು, ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮಕ್ಕೂ ಮುನ್ನವೇ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಪ್ರಮುಖ ಸಮಸ್ಯೆಗಳನ್ನು ದಾಖಲಿಸಬೇಕು ಎಂಬುದು ಜಿಲ್ಲಾಡಳಿತದ ಸೂಚನೆಯಾಗಿದೆ. ಕಾಟಾಚಾರಕ್ಕೆ ವೇದಿಕೆ ಕಾರ್ಯಕ್ರಮ ರೂಪಿಸಿ ಸಾಂಕೇತಿಕವಾಗಿ ಕೆಲವರಿಗೆ ಸವಲತ್ತು ವಿತರಿಸುವುದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ. ಕಾರ್ಯಕ್ರಮ ನಿಗದಿಯಾಗುವ ಗ್ರಾಮಗಳ ಅಷ್ಟೂ ಫಲಾನುಭವಿಗಳಿಗೆ ಸವಲತ್ತು ತಲುಪಿಸಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ.

ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಡಿಸಿ ನಡೆ ಆಯೋಜಿಸಿ ಹೋಬಳಿ ವ್ಯಾಪ್ತಿಯ ಅಷ್ಟೂ ಗ್ರಾಮಗಳ ಫಲಾನುಭವಿಗಳಿಗೆ ಸವಲತ್ತು ತಲುಪಿಸುವ ಇರಾದೆಯೂ ಜಿಲ್ಲಾಡಳಿತದ ಮುಂದಿದೆ. ನೂತನ ಜಿಲ್ಲಾಧಿಕಾರಿಯಾಗಿ ಆರ್.ಲತಾ ಅಧಿಕಾರ ಸ್ವೀಕರಿಸಿದ್ದು, ಮುಂದಿನ ಡಿಸಿ ನಡೆಯಲ್ಲಿ ಕೆಲವೊಂದು ಮಾರ್ಪಾಡುಗಳೊಂದಿಗೆ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ದೊರಕಿಸಿಕೊಡುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಗೊಳ್ಳುತ್ತಿದೆ.

ಡಿಸಿ ನಡೆ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ಮತ್ತಷ್ಟು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಕೆಲವು ಮಾರ್ಪಾಡಿಗೆ ಚಿಂತಿಸಲಾಗಿದೆ. ಕಾಲಹರಣಕ್ಕೆ ಬ್ರೇಕ್ ಹಾಕಿ ಜನರ ಅಹವಾಲು ಸ್ವೀಕಾರ, ಸಮಸ್ಯೆಗಳ ಪ್ರತ್ಯಕ್ಷ ದರ್ಶನ ಸೇರಿ ಫಲಾನು ಭವಿಗಳಿಗೆ ಸಲವತ್ತು ವಿತರಣೆಗೆ ಆದ್ಯತೆ ನೀಡಲು ಮುಂದಿನ ದಿನಗಳಲ್ಲಿ ಯೋಜಿತ ಕಾರ್ಯಕ್ರಮ ರೂಪಿಸ ಲಾಗುವುದು. ಕೆಲವೊಂದು ಸರ್ಜರಿ ನಡೆಯಲಿದೆ.

| ಆರ್.ಲತಾ, ಜಿಲ್ಲಾಧಿಕಾರಿ, ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net