

ನವದೆಹಲಿ: ದೇಶದಲ್ಲಿ ಮಾರ್ಚ್ನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಚಿಕಿತ್ಸೆಗೆ ವೆಂಟಿಲೇಟರ್ಗಳು ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸುತ್ತಲೇ ಜನರನ್ನು ವೆಂಟಿಲೇಟರ್ನಲ್ಲಿ ಇಟ್ಟು ಕೃತಕವಾಗಿ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿತ್ತು. ಹಾಗಾಗಿ ಆ ಸಂದರ್ಭದಲ್ಲಿ ವೆಂಟಿಲೇಟರ್ಗಳ ಕೊರತೆಯ ಬಗ್ಗೆ ಹುಯ್ಯಲ್ಲೆದ್ದಿತ್ತು.
ಇದನ್ನು ಮನಗಂಡ ವೆಂಟಿಲೇಟರ್ ತಯಾರಕರಲ್ಲದೆ, ಮಾರುತಿ ಸುಜುಕಿ ಇಂಡಿಯಾ ಸೇರಿ ಕಾರು ಉತ್ಪಾದನಾ ಸಂಸ್ಥೆಗಳು ಕೂಡ ಕಾರುಗಳ ಉತ್ಪಾದನೆ ನಿಲ್ಲಿಸಿ ವೆಂಟಿಲೇಟರ್ಗಳ ತಯಾರಿಕೆಗೆ ಒತ್ತು ನೀಡಿದ್ದರು. ಇದರ ಪರಿಣಾಮ ರಾಷ್ಟ್ರಾದ್ಯಂತ ಈಗ ಬೇಡಿಕೆಗಿಂತಲೂ ಹೆಚ್ಚಿನ ವೆಂಟಿಲೇಟರ್ಗಳ ದಾಸ್ತಾನುಗೊಂಡಿದೆ.
ಇದಕ್ಕೆ ಕಾರಣ, ಕೋವಿಡ್-19 ಸೋಂಕಿತರಿಗೆ ವೈದ್ಯರು ಕೃತಕವಾಗಿ ಆಮ್ಲಜನಕ ನೀಡುವ ಬದಲು ಸಾಮಾನ್ಯ ರೀತಿಯಲ್ಲೇ ಚಿಕಿತ್ಸೆ ನೀಡಲು ಮುಂದಾಗುತ್ತಿರುವುದು. ಇದರಿಂದಾಗಿ ವೆಂಟಿಲೇಟರ್ಗಳನ್ನು ಕೇಳುವವರು ದಿಕ್ಕಿಲ್ಲವಾಗಿ 47 ಸಾವಿರ ವೆಂಟಿಲೇಟರ್ಗಳು ಹಾಗೆಯೇ ಉಳಿದಿವೆ. ಹೀಗಾಗಿ, ರಫ್ತಿಗೆ ಅವಕಾಶ ದೊರೆತರೆ ಅವನ್ನು ಅನ್ಯರಾಷ್ಟ್ರಗಳಿಗೆ ಮಾರಾಟ ಮಾಡಿ ನಷ್ಟವನ್ನು ತುಂಬಿಸಿಕೊಳ್ಳುವ ಬಗ್ಗೆ ತಯಾರಕರು ಚಿಂತನೆ ನಡೆಸಿದ್ದಾರೆ.
ವೆಂಟಿಲೇಟರ್ಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಸಣ್ಣಪುಟ್ಟ ತಯಾರಕರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, (ಬಿಇಎಲ್), ಭಾರತ್ ಹೆವಿ
ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಮತ್ತು ಮಾರುತಿ ಸುಜುಕಿ ಕಂಪನಿಗಳೊಂದಿಗೆ ಕೈಜೋಡಿಸಿದ್ದರು. ವೆಂಟಿಲೇಟರ್ಗಳು ಮಾರಾಟವಾಗದಿರುವುದರಿಂದ ಇಂಥವರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.