Ratan Tata | ವಜ್ರದಲ್ಲಿ ಮೂಡಿಬಂದ ಧೀಮಂತ​ ನಾಯಕನ ಭಾವಚಿತ್ರ; ವಿಡಿಯೋಗೆ 5 ಮಿಲಿಯನ್​ಗೂ ಹೆಚ್ಚು ಜನರ ಮೆಚ್ಚುಗೆ

Untitled-design-8-2
Published on

ಗಾಂಧಿನಗರ: ದೇಶದ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಭಾರತದ ಧೀಮಂತ ನಾಯಕ ರತನ್​​ ಟಾಟಾ ಇಹಲೋಕ ತ್ಯಜಿಸಿರುವುದು ಭರಿಸಲಾಗದ ನಷ್ಟ ಎಂದರೆ ತಪ್ಪಗಲಾರದು. ರತನ್​ ಟಾಟಾ(Ratan Tata) ಅವರ ನಿಧನಕ್ಕೆ ದೇಶಾದ್ಯಂತ ಜನರು ಕಣ್ಣೀರಿಟ್ಟರು. ಸಾಮಾಜಿಕ ಜಾಲತಾಣಗಳ ಮೂಲಕ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಾಮಾನ್ಯ ಭಾರತೀಯರು ಕೂಡ ಅವರ ನೆನಪಿಗಾಗಿ ಕಂಬನಿ ಮಿಡಿದಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ದೇಣಿಗೆ ನೀಡುವ ಕೈಗಾರಿಕೋದ್ಯಮಿ ಎಂದರೆ ತಕ್ಷಣ ನೆನಪಿಗೆ ಬರುವುದು ರತನ್​ ಟಾಟಾ ಅವರ ಹೆಸರು. ಅವರ ಸರಳತೆ ಮತ್ತು ಅವರ ವ್ಯಕ್ತಿತ್ವದಿಂದಾಗಿ ಅವರು ಶಾಶ್ವತವಾಗಿ ಅಮರರಾಗಿದ್ದಾರೆ. ರತನ್ ಟಾಟಾ ಅವರ ವ್ಯಕ್ತಿತ್ವದಿಂದಾಗಿ ಪ್ರಪಂಚದಾದ್ಯಂತ ಅವರ ಅಭಿಮಾನಿಗಳಿಗೆ ಕೊರತೆಯಿಲ್ಲ.

ಇದೀಗ ಅವರ ನಿಧನದ ಮೂರನೇ ದಿನ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಗುಜರಾತ್​ನ ಉದ್ಯಮಿಯೊಬ್ಬರು ರತನ್ ಟಾಟಾ ಅವರ ಭಾವಚಿತ್ರವನ್ನು ತಯಾರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿಶೇಷವೆಂದರೆ ಈ ಭಾವಚಿತ್ರವನ್ನು ವಜ್ರದಿಂದ ರಚಿಸಲಾಗಿದೆ. 1100 ವಜ್ರಗಳನ್ನು ಬಳಸಿ ಮಾಡಲಾಗಿದೆ. ಸದ್ಯ ಈ ಭಾವಚಿತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಜ್ರದಿಂದ ಭಾವಚಿತ್ರ ಮಾಡಿದ ಉದ್ಯಮಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ವೈರಲ್​ ಆದ ಬಳಿಕ 5 ಮಿಲಿಯನ್​ಗೂ ಹೆಚ್ಚು ಮಂದಿ ವೀಕ್ಷಿಸಿದ್ದು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ರತನ್ ಟಾಟಾ ಅವರು ಕೇವಲ ಒಬ್ಬ ಉದ್ಯಮಿಯಾಗಿರಲಿಲ್ಲ, ಅವರು ಅನೇಕರಿಗೆ ಭರವಸೆಯ ದಾರಿದೀಪವಾಗಿದ್ದರು. ರತನ್​ ಟಾಟಾ ಅವರು ಯಾವಾಗಲೂ ಜನರಿಗೆ ಮೊದಲ ಸ್ಥಾನ ಕೊಡುತ್ತಾರೆ, ಪ್ರತಿಯೊಂದು ದತ್ತಿ ಕಾರ್ಯದಲ್ಲಿ ಅವರ ಆತ್ಮವು ಜೀವಂತವಾಗಿರುತ್ತದೆ. ಲೆಜೆಂಡ್​​​​ ವ್ಯಕ್ತಿಗೆ ಈ ಭಾವಚಿತ್ರವು ಸೂಕ್ತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ರತನ್​ ಟಾಟಾ ಅವರು ನಿಧನರಾದ ಬಳಿಕ ಅಂತಿಮ ವಿಧಿಗಳಿಗಾಗಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಅವರ ಎನ್‌ಸಿಪಿಎಯಲ್ಲಿ ಇರಿಸಲಾಗಿತ್ತು. ಈ ಸಮಯದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಿದರು. ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ವರ್ಲಿಯಲ್ಲಿರುವ ಸ್ಮಶಾನದಲ್ಲಿ ಮಾಡಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net