ತಮ್ಮನಂತಲ್ಲಾ ಅಣ್ಣ ಸೂರಜ್​; ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣನ ಹಿರಿಯ ಪುತ್ರ ಅರೆಸ್ಟ್​ ಆಗಿದ್ದೆ ರೋಚಕ

Revanna Sons
Published on

ಹಾಸನ: ವಿಧಾನಪರಿಷತ್​ ಸದಸ್ಯ ಡಾ. ಸೂರಜ್​ ರೇವಣ್ಣ ಅವರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದ್ದು, ಸೂರಜ್​ ರೇವಣ್ಣ ಅವರ ಬಂಧನದ ಕಥೆಯೇ ರೋಚಕವಾಗಿದೆ. ಈ ಹಿಂದೆ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ 20ಕ್ಕೂ ಹೆಚ್ಚು ದಿನಗಳ ಕಾಲ ಯಾರ ಕೈಗೂ ಸಿಗದೇ ಆಟವಾಡಿಸಿದ್ದರು. ಆದರೆ, ಸೂರಜ್​ ರೇವಣ್ಣ ತಾವಾಗಿಯೇ ಹೋಗಿ ಪೊಲೀಸರ ಅತಿಥಿಯಾಗಿದ್ದು, ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಸೂರಜ್​ ರೇವಣ್ಣ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದಕ್ಕೆ ಪ್ರತಿಯಾಗಿ ಸೂರಜ್​ ರೇವಣ್ಣ ಅವರ ಆಪ್ತ ಸಹಾಯಕ ಕೂಡ ದೂರು ದಾಖಲಿಸಿದ್ದರು. ದೂರನ್ನು ಪರಿಶೀಲಿಸಿದ ನಂತರ ಪೊಲೀಸರು FIR ದಾಖಲಿಸಿ ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಕೊಡುವಂತೆ ದೂರುದಾರರಿಗೆ ಸೂಚಿಸಿದ್ದರು.

ಅದರಂತೆ ತಮ್ಮ ಬಳಿ ಇರುವ ಸಾಕ್ಷಿಯನ್ನು ಕೊಡಲು ಹಾಸನದಲ್ಲಿರುವ CEN ಠಾಣೆಗೆ ಶನಿವಾರ (ಜೂನ್​ 22) ಸಂಜೆ ಆಗಮಿಸಿದ ವೇಳೆ ಹೊಳೆನರಸೀಪುರ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಠಾಣೆಗೆ ಊಟವನ್ನು ತರಿಸಿಕೊಟ್ಟಿದ್ದಾರೆ. ಬಳಿಕ ಬೆಳಗಿನ ಜಾವ 4 ಗಂಟೆವರೆಗೂ ವಿಚಾರಣೆ ನಡೆಸಿದ ಅಧಿಕಾರಿಗಳು ಅವರನ್ನ ವಶಕ್ಕೆ ಪಡೆದಿದ್ದಾರೆ. ಇತ್ತ ಸೂರಜ್​ ರೇವಣ್ಣ ಬಂಧನದ ಸುದ್ದಿ ಹೊರಬರುತ್ತಿದ್ದಂತೆ ತಾವಾಗಿಯೇ ಠಾಣೆಗೆ ಬಂದು ಅರೆಸ್ಟ್​ ಆದ್ರಾ ಎಂದು ಅನುಮಾನ ಮೂಡಲು ಶುರುವಾಗಿದೆ.

Revanna Family

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪಿಸಿ ಎಫ್‌ಐಆರ್‌ ದಾಖಲಿಸಿದ್ದರು. ಇತ್ತ ಸಂತ್ರಸ್ತ ದೂರು ದಾಖಲಿಸುತ್ತಿದ್ದಂತೆ ಆತನ ವಿರುದ್ಧವೇ ಸೂರಜ್‌ ಆಪ್ತರು ದೂರು ನೀಡಿದ್ದರು. ಸುಳ್ಳು ಆರೋಪ ಮಾಡಿ ಐದು ಕೋಟಿ ರೂ. ಹಣಕ್ಕಾಗಿ ಸಂತ್ರಸ್ತ ಪೀಡಿಸಿದ್ದಾನೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಾಕ್ಷಿ ನೀಡಲು ಸೂರಜ್ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಆಡಿಯೊ ರೆಕಾರ್ಡ್, ಫೋಟೊ ಹಾಗೂ ಇತರ ದಾಖಲೆ ನೀಡುವ ಸಲುವಾಗಿ ಸೂರಜ್ ಬಂದಿದ್ದರು. ಬಂಧನ ಸಾಧ್ಯತೆಯ ನಿರೀಕ್ಷೆ ಮಾಡದೆ ಬಂದ ಸೂರಜ್ ರೇವಣ್ಣ ಇದೀಗ ಅರೆಸ್ಟ್‌ ಆಗಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net