

ನವದೆಹಲಿ: ವಿಮಾನದಲ್ಲಿದ್ದ ಒಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ಪ್ರಯಾಣಿಕರ ಸಹಿತ ಒಟ್ಟು 265 ಜನರ ಸಾವಿಗೆ ಕಾರಣವಾದ ಜೂನ್ 12ರ ಅಹಮದಾಬಾದ್ ವಿಮಾನ ದುರಂತಕ್ಕೆ ‘ಪೈಲಟ್ ದೋಷ’ ಕಾರಣವೆಂಬ ವರದಿ ‘ದುರದೃಷ್ಟಕರ ಹಾಗೂ ಬೇಜವಾಬ್ದಾರಿಯುತ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದುರಂತದ ಬಗ್ಗೆ ಕೋರ್ಟ್ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ. ಎನ್.ಕೆ. ಸಿಂಗ್ ಅವರ ನ್ಯಾಯಪೀಠ, ಈ ಸಂಬಂಧ ಉತ್ತರಿಸುವಂತೆ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ನೋಟಿಸ್ ಜಾರಿ ಮಾಡಿದೆ.
ವಿಮಾನಯಾನ ಸುರಕ್ಷತೆಯ ಎನ್ಜಿಒ ಆಗಿರುವ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದೆ. ಪ್ರಾಥಮಿಕ ತನಿಖಾ ವರದಿಯಲ್ಲಿ ಮಹತ್ವದ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು ದುರಂತದ ಮರುತನಿಖೆಗೆ ಆಗ್ರಹಿಸಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋಗೆ (ಎಸಿಐಬಿ) ಕೂಡ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದುರಂತಕ್ಕೀಡಾದ ಏರ್ ಇಂಡಿಯಾದ ಡ್ರೀಮ್ೈನರ್ ವಿಮಾನದ ಪೈಲಟ್ಗಳಾದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಅವರ ನಡುವಿನ ಸಂಭಾಷಣೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ಪೈಲಟ್, ‘ನೀನು ಇಂಧನವನ್ನು ಯಾಕೆ ಕಡಿತಗೊಳಿಸಿದೆ?’ ಎಂದು ಕೇಳಿದ್ದಕ್ಕೆ ಇನ್ನೊಬ್ಬ ಪೈಲಟ್ ‘ನಾನು ಹಾಗೆ ಮಾಡಿಲ್ಲ’ ಎಂದು ಉತ್ತರಿಸಿದ್ದು ಕಾಕ್ಪಿಟ್ ಆಡಿಯೋ ದಾಖಲೆ ದೃಢಪಡಿಸಿದೆ ಎಂದು ವರದಿ ತಿಳಿಸಿದೆ. ಇದು ಆಘಾತಕಾರಿ ದುರಂತಕ್ಕೆ ಪೈಲಟ್ ದೋಷ ಕಾರಣವಿರಬಹುದೆಂಬ ಊಹಾಪೋಹಕ್ಕೆ ಕಾರಣವಾಗಿದೆ.