ಇಂಥ ಕಾರಣಕ್ಕಾಗಿ ಮಾಧ್ಯಮದ ಕತ್ತು ಹಿಸುಕಲು ಸಾಧ್ಯವಿಲ್ಲವೆಂದ ಸುಪ್ರೀಂಕೋರ್ಟ್​

Supreme Court 3 Jan 20
Published on

ನವದೆಹಲಿ: ತಬ್ಲಿಘಿ ಜಮಾತ್ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸರಂತೆ ಬಿಂಬಿಸಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂಬ ವಾದವನ್ನು ಪುರಸ್ಕರಿಸದ ಸುಪ್ರೀಂಕೋರ್ಟ್, ಇಂಥ ಕಾರಣಕ್ಕಾಗಿ ಮಾಧ್ಯಮದ ಕತ್ತು ಹಿಸುಕಲು ಆಗದು ಎಂದು ಸೋಮವಾರ ಹೇಳಿದೆ.

ಈ ಪ್ರಕರಣದಲ್ಲಿ ಭಾರತೀಯ ಪತ್ರಿಕಾ ಮಂಡಳಿಯನ್ನು (ಪಿಸಿಐ) ಒಂದು ಪಕ್ಷವನ್ನಾಗಿ ಮಾಡುವಂತೆ ಅರ್ಜಿದಾರ ಸಂಘಟನೆ ಜಮಾತ್ ಉಲೇಮಾ-ಇ-ಹಿಂದ್​ಗೆ ನಿರ್ದೇಶಿಸಿದೆ. ಇದಾದ ನಂತರವಷ್ಟೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ಕರೊನಾ ವೈರಸ್ ಪ್ರಕರಣಗಳಿಗೂ ನವದೆಹಲಿಯ ನಿಜಾಮುದ್ದೀನ್ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶಕ್ಕೂ ಸಂಬಂಧ ಕಲ್ಪಿಸಿ ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಹಾಗೂ ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಮುಸ್ಲಿಮರನ್ನು ಗುರಿಯಾಗಿಸುತ್ತಿರುವುದನ್ನು ಆಕ್ಷೇಪಿಸಿ ಜಮಾತ್ ಉಲೇಮಾ-ಇ-ಹಿಂದ್ ಕಳೆದ ವಾರ ಸವೋನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ವಿಚಾರದಲ್ಲಿ ‘ಸುಳ್ಳು ಸುದ್ದಿ ಹರಡದಂತೆ’ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿತ್ತು. ನಿರ್ದಿಷ್ಟ ಜನಸಮುದಾಯಕ್ಕೆ ಕಳಂಕ ತರುವುದರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವಸಂಸ್ಥೆ ನೀಡಿದ್ದ ಕರೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ 2 ದಿನಗಳ ನಂತರ ಸವೋನ್ನತ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

  1. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸು ಕರೆತರುವಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಲ್ಕು ವಾರ ಮುಂದೂಡಿದೆ.

2. ಕರೊನಾ ವಿರುದ್ಧದ ಹೋರಾಟದ ನೆರವಿಗಾಗಿ ಪ್ರಧಾನಿ ಮೋದಿ ರಚಿಸಿರುವ ಪಿಎಂ-ಕೇರ್ಸ್ ನಿಧಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ದುರ್ಬಲ ವರ್ಗದವರಿಗೆ ಉಚಿತ ಪರೀಕ್ಷೆ

ಆರ್ಥಿಕವಾಗಿ ದುರ್ಬಲವಾದ ವರ್ಗಗಳ ಜನರು ಹಾಗೂ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿ ಬರುವವರಿಗೆ ಮಾತ್ರವೇ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19 ಉಚಿತ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂದು ಸುಪ್ರೀಂ ಸ್ಪಷ್ಟಪಡಿಸಿದೆ. ಉಚಿತ ಪರೀಕ್ಷೆಯ ಸೂಚನೆಯಿಂದ ಆರ್ಥಿಕ ಮುಗ್ಗಟ್ಟು ಎದರಾಗುತ್ತದೆ ಎಂದು ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಸ್ಪಷ್ಟನೆ ನೀಡಿದೆ. ಪಿಎಂಜೆಎವೈ ಫಲಾನುಭವಿಗಳಿಗೆ ಉಚಿತ ಪರೀಕ್ಷೆಯ ಸೌಲಭ್ಯವಿದೆಯೆಂದು ಐಸಿಎಂಆರ್ ಅಫಿಡವಿಟ್ ಸಲ್ಲಿಸಿದೆ. ಖಾಸಗಿ ಲ್ಯಾಬ್​ಗಳಲ್ಲಿ ಎಲ್ಲರಿಗೆ ಉಚಿತ ಪರೀಕ್ಷೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶಿಸಿತ್ತು.

ಲಾಕ್​ಡೌನ್​ನಿಂದಾಗಿ ಟಿವಿ ಚಾನಲ್​ಗಳ ಪ್ರಸಾರಕರ ಆರ್ಥಿಕ ಮುಗ್ಗಟ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೊದಲ ತ್ರೖೆಮಾಸಿಕಕ್ಕೆ ಡಿಡಿ ಫ್ರಿ ಡಿಶ್​ನಲ್ಲಿನ ಸ್ಲ್ಯಾ್ಲ್ಗಳ ಮೇಲಿನ ಶುಲ್ಕ ಮನ್ನಾ ಹಾಗೂ ಮುಂದಿನ ತ್ರೖೆಮಾಸಿಕಕ್ಕೆ ಶೇ. 50 ಶುಲ್ಕ ವಿಧಿಸಿ ಎಂದು ಎನ್​ಬಿಎ ಕೇಂದ್ರಕ್ಕೆ ಮನವಿ ಮಾಡಿದೆ.

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರ ಉಳಿತಾಯ ಖಾತೆಯಿಂದ ಜೂನ್ 30ರವರೆಗೆ ಸ್ವಯಂಚಾಲಿತವಾಗಿ ಹಣ ವರ್ಗಾವಣೆ ಆಗುವುದಿಲ್ಲ. ಸ್ವಯಂಚಾಲಿತ ವರ್ಗಾವಣೆಗೆ ಮುಂದುವರಿಯಲಿ ಎಂಬ ಗ್ರಾಹಕರು ಈ ಬಗ್ಗೆ ಬ್ಯಾಂಕ್​ಗೆ ಒಪ್ಪಿಗೆ ನೀಡಬೇಕು ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net